ಹನಕೆರೆ ಬಳಿ ಅಂಡರ್‌ಪಾಸ್ ನಿರ್ಮಾಣ: ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ

| Published : Jan 27 2025, 12:48 AM IST

ಸಾರಾಂಶ

ಸರ್ಕಾರದಿಂದ ವಿಪತ್ತು ಉಪಶಮನ ನಿಧಿಯಡಿ ೫.೫೪ ಕೋಟಿ ರು.ಅನುದಾನಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದ್ದು, ವಿಪತ್ತು ಸಂಭವಿಸಿದ ವೇಳೆ ಆಗುವಂತಹ ಅಪಾಯವನ್ನು ತಗ್ಗಿಸಲು ನಾಲ್ಕು ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಜರುಗಿಸಲಾಗಿದೆ. ಇದಕ್ಕಾಗಿ ಹನಕೆರೆಯ ಬಳಿ ೭.೯೦ ಕೋಟಿ ರು. ವೆಚ್ಚದಲ್ಲಿ ಅಂಡರ್‌ ಪಾಸ್ ನಿರ್ಮಾಣಕ್ಕೆ ಅನುಮೋದನೆ ದೊರಕಿರುದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಂದೇಶ ಭಾಷಣದಲ್ಲಿ ಮಾತನಾಡಿ, ಅದೇ ರೀತಿ ಬಿ.ಗೌಡಳ್ಳಿಯ ಬಳಿ ೬.೭ ಕೋಟಿ ರು. ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣಕ್ಕೂ ಅನುಮೋದನೆ ದೊರಕಿರುವುದಾಗಿ ಹೇಳಿದರು.

ಸರ್ಕಾರದಿಂದ ವಿಪತ್ತು ಉಪಶಮನ ನಿಧಿಯಡಿ ೫.೫೪ ಕೋಟಿ ರು.ಅನುದಾನಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದ್ದು, ವಿಪತ್ತು ಸಂಭವಿಸಿದ ವೇಳೆ ಆಗುವಂತಹ ಅಪಾಯವನ್ನು ತಗ್ಗಿಸಲು ನಾಲ್ಕು ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದರು.

ಕಂದಾಯ ದಾಖಲೆಗಳ ಸುರಕ್ಷತೆಯ ಉದ್ದೇಶದಿಂದ ಭೂ ಸುರಕ್ಷಾ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಇದರಂತೆ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲು, ಎಲ್ಲಾ ತಾಲೂಕುಗಳಲ್ಲೂ ಭೂ ಸುರಕ್ಷಾ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಕೆಎಸ್‌ಆರ್‌ಟಿಸಿ ಎಲ್ಲಾ ನೌಕರರಿಗೆ ಅನುಕೂಲವಾಗುವಂತೆ ನಗದು ರಹಿತ ಚಿಕಿತ್ಸಾ ಯೋಜನೆಗೆ ಚಾಲನೆ ನೀಡಲಾಗಿದೆ. ನಿಗಮದ ಎಲ್ಲಾ ನೌಕರರು ಮತ್ತು ಅವರ ಅವಲಂಬಿತರು ಈ ಯೋಜನೆಯ ಫಲಾನುಭವಿಗಳಾಗಿದ್ದು, ರಾಜ್ಯಾದ್ಯಂತ ಸುಮಾರು ೨೭೫ಕ್ಕೂ ಅಧಿಕ ಖಾಸಗಿ-ಸರ್ಕಾರಿ ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಳ್ಳಲಾಗಿದೆ. ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬದವರಿಗೆ ೧ ಕೋಟಿ ರು. ವಿಮಾ ಸೌಲಭ್ಯ ನೀಡುವ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಫೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣ ಖರೀದಿಸಲು ಹಾಗೂ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಸೃಜನೆಗಾಗಿ ಅಗತ್ಯ ಕ್ರಮವಹಿಸಿರುವುದಾಗಿ ತಿಳಿಸಿದರು.

ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್-ಅನಿಲ ಚಿತಾಗಾರವನ್ನು ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ೪ ಕೋಟಿ ರು. ಅನುದಾನದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆ ನೀಡಿದ ಅವರು,

ಆರ್‌ಐಡಿಎಫ್- ಟ್ರಾಂಚ್ ೩.೦ರಡಿ ಮದ್ದೂರು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದರು

ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಪಂ ಸಿಇಒ ಶೇಖ್ ತನವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಇತರರಿದ್ದರು.ಜಿಲ್ಲಾಡಳಿತದಿಂದ ಗೌರವ:

ಮರಣಾನಂತರ ಅಂಗಾಂಗ ದಾನ ಮಾಡಿದ ಆರ್.ನಟರಾಜು, ಎಲ್.ಎಸ್.ಆನಂದ್‌ಕುಮಾರ್, ಬಿ.ವಿನಯಕುಮಾರ್ ಅವರ ಕುಟುಂಬಸ್ಥರನ್ನು ಗೌರವಿಸಲಾಯಿತು

ಸಾರಿಗೆ ವಾಹನ ಚಾಲಕರಿಗೆ ಸನ್ಮಾನ:

ಅಪಘಾತ ರಹಿತ ಸುರಕ್ಷಿತ ವಾಹನ ಚಾಲನೆಗಾಗಿ ಮಂಡ್ಯ ಘಟಕದ ಮಲ್ಲೇಶ್, ನಾಗಮಂಗಲ ಘಟಕದ ಹೊನ್ನೇಗೌಡ, ಮಂಡ್ಯ ವಿಭಾಗೀಯ ಕಚೇರಿಯ ಸೋಮಶೇಖರ್ ಅವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

ಸಾಧಕರಿಗೆ ಗೌರವ ಸಮರ್ಪಣೆ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಖೋ-ಖೋ: ಕೆ.ಗೌತಮ್, ಗುಂಡು ಎಸೆತ: ಕೆ.ಆರ್.ಸಾನವಿ, ಜಾವೆಲಿನ್ ಥ್ರೋ-ಡೆಚ್ಚನ್ ಜೋಂಡೋಳ, ೨೪ ಗಂಟೆಗಳ ಕಾಲ ರಕ್ತದಾನ ಶಿಬಿರ ಆಯೋಜಿಸಿದ್ದ ಜೀವಧಾರೆ ಟ್ರಸ್ಟ್‌ನ ಎಸ್.ಎಂ.ನಟರಾಜು ಅವರನ್ನು ಗೌರವಿಸಲಾಯಿತು. ರಾಷ್ಟ್ರ ಮಟ್ಟದಲ್ಲಿ ವಿಜೇತರಾಗಿ ಜಿಲ್ಲೆಯ ಕೀರ್ತಿಯನ್ನು ಎಲ್ಲಡೆ ಪಸರಿಸಿದ ಖೋ-ಖೋ ಕ್ರೀಡಾಪಟು ಕೆ.ಗೌತಮ್ ಅವರಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ವೈಯಕ್ತಿಕವಾಗಿ ಒಂದು ಲಕ್ಷ ರು. ನಗದು ಹಣ ನೀಡಿ ಪ್ರೋತ್ಸಾಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳು:

ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾರ್ಮೆಲ್ ಪ್ರೌಢಶಾಲೆ, ಗ್ಲೋಬಲ್ ಪ್ರೌಢಶಾಲೆ, ಅನಿಕೇತನ ಪ್ರೌಢಶಾಲೆ, ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪಥ ಸಂಚಲನ ವಿಜೇತರು:

ಅಬಕಾರಿ ದಳ -ಪ್ರಥಮ, ಜಿಲ್ಲಾ ಸಶಸ್ತ್ರ ಮೀಸಲು ಪಡೆ-ದ್ವಿತೀಯ, ಗೃಹ ರಕ್ಷಕ ದಳ- ತೃತೀಯ, ಬಾಲಕರ ಎನ್‌ಸಿಸಿ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದಲ್ಲಿ ಅನಿಕೇತನ ಪದವಿ ಪೂರ್ವ ಕಾಲೇಜು ಎನ್‌ಸಿಸಿ ತಂಡ- ಪ್ರಥಮ, ಪಿಇಎಸ್ ಕಾಲೇಜಿನ ಎನ್‌ಸಿಸಿ ತಂಡ- ದ್ವಿತೀಯ ಹಾಗೂ ಕಾಳೇಗೌಡ ಎನ್‌ಸಿಸಿ ಬಾಲಕರ ತಂಡ- ತೃತೀಯ. ಬಾಲಕಿಯರ ವಿಭಾಗದಲ್ಲಿ ಅನಿಕೇತನ ಪದವಿ ಪೂರ್ವ ಕಾಲೇಜು ಎನ್‌ಸಿಸಿ ತಂಡ- ಪ್ರಥಮ, ಮಂಡ್ಯ ವಿಶ್ವವಿದ್ಯಾಲಯ ತಂಡ- ದ್ವಿತೀಯ ಹಾಗೂ ರೋಟರಿ ಪ್ರೌಢಶಾಲೆ ಗೈಡ್ಸ್ ತಂಡ ತೃತೀಯ. ಪ್ರೌಢಶಾಲಾ ವಿಭಾಗದಲ್ಲಿ ಡ್ಯಾಫೋಡಿಲ್ಸ್ ಪ್ರೌಢಶಾಲೆ ಬಾಲಕಿಯರ ತಂಡ- ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ತಂಡ- ದ್ವಿತೀಯ, ಆದರ್ಶ ಪ್ರೌಢಶಾಲೆ ತಂಡ ತೃತೀಯ. ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಸೆಂಟ್ ಜೋಸೆಫ್ ಪ್ರಾಥಮಿಕ ಶಾಲೆ ಬಾಲಕಿಯರ ತಂಡ- ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ತಂಡ- ದ್ವಿತೀಯ, ವಿಮಲ ಬಾಲಕಿಯರ ಶಾಲೆ ತಂಡ ತೃತೀಯ.