ವನ್ಯಜೀವಿಗಳ ದಾಹ ನೀಗಲು ನೀರಿನ ತೊಟ್ಟಿಗಳ ನಿರ್ಮಾಣ

| Published : Feb 12 2024, 01:33 AM IST / Updated: Feb 12 2024, 03:42 PM IST

wildlife
ವನ್ಯಜೀವಿಗಳ ದಾಹ ನೀಗಲು ನೀರಿನ ತೊಟ್ಟಿಗಳ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆಯಲ್ಲಿ ವನ್ಯಜೀವಿಗಳ ನೀರಿನ ದಾಹವನ್ನು ತಣಿಸಲು ಅರಣ್ಯ ಇಲಾಖೆ, ಗಣಿ ಕಂಪನಿಗಳು ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ವಾಟರ್ ಹೋಲ್(ನೀರಿನ ಹೊಂಡ)ಗಳನ್ನು ನಿರ್ಮಿಸಿ, ಅವುಗಳಲ್ಲಿ ನೀರನ್ನು ತುಂಬಿಸುತ್ತಿವೆ.

ವಿ.ಎಂ. ನಾಗಭೂಷಣ

ಸಂಡೂರು: ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ವನ್ಯಜೀವಿಗಳ ನೀರಿನ ದಾಹ ತಣಿಸಲು ನೀರಿನ ತೊಟ್ಟಿ, ವಾಟರ್ ಹೋಲ್‌ಗಳನ್ನು ನಿರ್ಮಿಸಿ, ಅವುಗಳಿಗೆ ನೀರು ತುಂಬಿಸಲು ಅರಣ್ಯ ಇಲಾಖೆ, ಗಣಿ ಕಂಪನಿಗಳು, ಲಾರಿ ಮಾಲೀಕರು ಹಾಗೂ ಚಾಲಕರ ಸಂಘ ಕೈಗೊಂಡಿರುವ ಕ್ರಮ ಪರಿಸರಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಫೆಬ್ರವರಿ ಆರಂಭದಿಂದಲೇ ಸೂರ್ಯನ ಕಿರಣಗಳ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿಂದಿನ ವರ್ಷ ಮಳೆ ಕೊರತೆಯ ಕಾರಣ ಒಂದೆಡೆ ಅಂತರ್ಜಲ ಕುಸಿಯುತ್ತಿದ್ದರೆ, ಮತ್ತೊಂದೆಡೆ ಕೆರೆ- ಕುಂಟೆ ಮುಂತಾದ ಬಾಹ್ಯ ಜಲಮೂಲಗಳು ಬತ್ತತೊಡಗಿವೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಅಲ್ಲಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ.

ನೀರಿನ ಹೊಂಡ ನಿರ್ಮಾಣ: ಬೇಸಿಗೆಯಲ್ಲಿ ವನ್ಯಜೀವಿಗಳ ನೀರಿನ ದಾಹವನ್ನು ತಣಿಸಲು ಅರಣ್ಯ ಇಲಾಖೆ, ಗಣಿ ಕಂಪನಿಗಳು ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ವಾಟರ್ ಹೋಲ್(ನೀರಿನ ಹೊಂಡ)ಗಳನ್ನು ನಿರ್ಮಿಸಿ, ಅವುಗಳಲ್ಲಿ ನೀರನ್ನು ತುಂಬಿಸುತ್ತಿವೆ. ಇವುಗಳಲ್ಲದೆ ಹಲವೆಡೆ ವನ್ಯಜೀವಿಗಳಿಗಾಗಿ ಸಣ್ಣ ಪ್ರಮಾಣ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ತುಂಬಿಸಲಾಗುತ್ತಿದೆ.

ನೀರಿನ ತೊಟ್ಟಿಗಳ ನಿರ್ಮಾಣ: ತಾಲೂಕಿನ ಯಶವಂತನಗರದ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ವನ್ಯಜೀವಿಗಳ ನೀರಿನ ದಾಹವನ್ನು ತಣಿಸಲು ಅಂಕಮನಾಳ್ ಕ್ರಾಸ್‌ದಿಂದ ಕುಮಾರಸ್ವಾಮಿ ದೇವಸ್ಥಾನ ಮಾರ್ಗದಲ್ಲಿ ಶನಿವಾರ ೬ ಸಿಮೆಂಟಿನ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ ಮತ್ತು ಅವುಗಳಲ್ಲಿ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಸಂಘದ ಈ ಕ್ರಮ ಸಾರ್ವಜನಿಕರ ಮೆಚುಗೆಗೆ ಪಾತ್ರವಾಗಿದೆ.

ಸಂಡೂರಿನ ಕಾಡಿನಲ್ಲಿ ಚಿರತೆ, ಕರಡಿ, ಕಾಡುಹಂದಿ, ಜಿಂಕೆ, ನರಿ, ನವಿಲು ಮುಂತಾದ ವೈವಿಧ್ಯಮಯ ಪ್ರಾಣಿ- ಪಕ್ಷಿ ಸಂಕುಲವನ್ನು ಕಾಣಬಹುದಾಗಿದೆ.

ಬೇಸಿಗೆಯಲ್ಲಿ ವನ್ಯಜೀವಿಗಳ ನೀರಿನ ದಾಹವನ್ನು ತೀರಿಸಲು ಅರಣ್ಯ ಇಲಾಖೆ, ಗಣಿ ಕಂಪನಿಗಳು, ಲಾರಿ ಮಾಲೀಕರು ಹಾಗೂ ಚಾಲಕರ ಸಂಘ ಮುಂದಾಗಿರುವುದು ವನ್ಯಜೀವಿಗಳ ಭವಿಷ್ಯ, ಸಂರಕ್ಷಣೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಮಾತ್ರವಲ್ಲದೆ, ಅವಶ್ಯಕವೂ ಆಗಿದೆ. 

ಜಲಮೂಲ ಬರಿದು: ಕಾಡಿನಲ್ಲಿ ಜಲಮೂಲಗಳು ಬರಿದಾಗಿವೆ. ಇದರಿಂದ ವನ್ಯಜೀವಿಗಳಿಗೆ ಆಗುವ ತೊಂದರೆ ತಿಳಿದು, ಅವುಗಳ ನೀರಿನ ದಾಹವನ್ನು ತಣಿಸಲು ಗ್ರಾಮದ ಲಾರಿ ಮಾಲೀಕರು, ಚಾಲಕರ ಸಂಘದ ವತಿಯಿಂದ ಕಾಡಿನಲ್ಲಿ ೬ ತೊಟ್ಟಿಗಳನ್ನು ನಿರ್ಮಿಸಲಾಗಿದೆ. 

ಅವುಗಳಲ್ಲಿ ನೀರನ್ನು ತುಂಬಿಸಲಾಗುವುದು ಎಂದು ಯಶವಂತನಗರದ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಹನುಮಂತ ಹಾಗೂ ಹಾಲೇಶ್ ತಿಳಿಸಿದರು.

ಟ್ಯಾಂಕರ್‌ ನೀರು: ಅರಣ್ಯ ಇಲಾಖೆ ಹಾಗೂ ಗಣಿ ಕಂಪನಿಗಳ ವತಿಯಿಂದ ವನ್ಯಜೀವಿಗಳಿಗಾಗಿ ತಾಲೂಕಿನ ಅರಣ್ಯ ಪ್ರದೇಶದ ವಿವಿಧೆಡೆ ನೀರಿನ ಹೊಂಡ ಹಾಗೂ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಟ್ಯಾಂಕರ್ ಮೂಲಕ ನೀರನ್ನು ತುಂಬಿಸಲಾಗುತ್ತಿದೆ ಎಂದು ಉತ್ತರ ಹಾಗೂ ದಕ್ಷಿಣ ವಲಯ ಅರಣ್ಯಾಧಿಕಾರಿಗಳಾದ ದಾದಾ ಖಲಂದರ್ ಹಾಗೂ ಡಿ.ಕೆ. ಗಿರೀಶ್‌ಕುಮಾರ್ ತಿಳಿಸಿದರು.