ಬಳ್ಳಾರಿಯಲ್ಲಿ ಸುಸಜ್ಜಿತ ಕ್ರೀಡಾ ವಸತಿನಿಲಯ ನಿರ್ಮಾಣ

| Published : Jan 08 2024, 01:45 AM IST

ಬಳ್ಳಾರಿಯಲ್ಲಿ ಸುಸಜ್ಜಿತ ಕ್ರೀಡಾ ವಸತಿನಿಲಯ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿಯಲ್ಲಿ ರಾಜ್ಯವೇ ತಿರುಗಿ ನೋಡುವಂತಹ ಕ್ರೀಡಾ ವಸತಿನಿಲಯ ನಿರ್ಮಾಣ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿರುವೆ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ.

ಬಳ್ಳಾರಿ: ರಾಜ್ಯದಲ್ಲಿಯೇ ಅತ್ಯಂತ ಮಾದರಿಯಾದ ಸುಸಜ್ಜಿತ ಕ್ರೀಡಾ ವಸತಿನಿಲಯವನ್ನು ಬಳ್ಳಾರಿಯಲ್ಲಿ ನಿರ್ಮಿಸಲಾಗುವುದು ಎಂದು ಯುವವಜನ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ತಿಳಿಸಿದರು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡಾ ಚಟವಟಿಕೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ಯುವಜನರ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ. ಬಳ್ಳಾರಿಯಲ್ಲಿ ರಾಜ್ಯವೇ ತಿರುಗಿ ನೋಡುವಂತಹ ಕ್ರೀಡಾ ವಸತಿನಿಲಯ ನಿರ್ಮಾಣ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿರುವೆ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ. ಕ್ರೀಡಾ ವಸತಿ ನಿಲಯ ಸ್ಥಾಪನೆಯಿಂದ ಈ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ಹಾಗೂ ಕ್ರೀಡಾರಂಗದಲ್ಲಿ ಸಾಧನೆ ಮಾಡಲು ಅವಕಾಶವಾಗಲಿದೆ ಎಂದರು.

ಫೆಬ್ರವರಿಯಲ್ಲಿ ಬಳ್ಳಾರಿ ಉತ್ಸವ: ಬಳ್ಳಾರಿಯಲ್ಲಿ ಮೊದಲ ಬಾರಿಗೆ ನಡೆದ ಯುವಜನೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂಬ ಆಶಯವನ್ನು ಹೊಂದಲಾಗಿತ್ತು. ಆದರೆ, ಸಮಯಾವಕಾಶದ ಕೊರತೆಯಿಂದ ಆಗಲಿಲ್ಲ. ಆದರೂ, ಫೆಬ್ರವರಿಯಲ್ಲಿ ಬಳ್ಳಾರಿ ಉತ್ಸವ ಆಯೋಜಿಸಿ ಸಿಎಂ, ಡಿಸಿಎಂ ಸೇರಿದಂತೆ ರಾಜ್ಯದ ಮಂತ್ರಿ ಮಂಡಲದೊಂದಿಗೆ ವಿಜೃಂಭಣೆಯಿಂದ ಮಾಡಲು ನಿರ್ಧರಿಸಲಾಗಿದೆ ಎಂದರು.

ಶಾಸಕ ನಾರಾ ಭರತ್‌ ರೆಡ್ಡಿ ಮಾತನಾಡಿ, ನಮ್ಮ ಭಾಗದ ಯುವಕರಿಗೆ ಕ್ರೀಡಾ ಮೀಸಲಾತಿಗಳಲ್ಲಿ ಉದ್ಯೋಗ ಸಿಗುತ್ತಿಲ್ಲ. ಕ್ರೀಡಾ ಸಚಿವ ನಾಗೇಂದ್ರ ಅವರು ಕ್ರೀಡಾ ಮೀಸಲಾತಿ ಅಡಿ ಉದ್ಯೋಗ ವಲಯದಲ್ಲಿ ಕೆಲಸ ಸಿಗುವಂತೆ ಕ್ರಮ ವಹಿಸಬೇಕು. ಬಳ್ಳಾರಿ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿಯೇ ಸ್ಪೋರ್ಟ್ಸ್‌ ಹಬ್ ಆಗಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್‌. ಶಶಿಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಜಿಪಿ ಬಿ.ಎಸ್‌. ಲೋಕೇಶ್‌ ಕುಮಾರ್‌, ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ, ಎಸ್ಪಿ ರಂಜಿತ್‌ ಕುಮಾರ್‌ ಬಂಡಾರು, ಎಡಿಸಿ ಮೊಹ್ಮದ್‌ ಝುಬೇರ, ಸಹಾಯಕ ಆಯುಕ್ತ ಹೇಮಂತ್‌, ಪಾಲಿಕೆ ಉಪಮೇಯರ್‌ ಜಾನಕಿ, ಇಲಾಖೆಯ ಸಹಾಯಕ ನಿರ್ದೇಶಕಿ ಕೆ. ಗ್ರೇಸಿ, ಕಾಂಗ್ರೆಸ್‌ ಮುಖಂಡ ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಪಾಲಿಕೆ ಸದಸ್ಯರು ಇದ್ದರು.

ಬಳ್ಳಾರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌, ಸಂಡೂರು ಶಾಸಕ ಈ. ತುಕಾರಾಂ, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ, ಸಂಸದ ವೈ. ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಚಂದ್ರಶೇಖರ್‌ ಬಿ. ಪಾಟೀಲ್‌, ಶಶೀಲ್‌ ಜಿ. ನಮೋಶಿ, ವೈ.ಎಂ. ಸತೀಶ್‌ ಅವರು ಗೈರಾಗಿದ್ದರು.