ಪುತ್ತೂರಿನಲ್ಲಿ ಬೃಹತ್ ತಾಲೂಕು ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆ ಆರಂಭ

| Published : Jan 20 2025, 01:33 AM IST

ಪುತ್ತೂರಿನಲ್ಲಿ ಬೃಹತ್ ತಾಲೂಕು ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ತಾಲೂಕಿನ ಮುಂಡೂರು ಮತ್ತು ನೈತ್ತಾಡಿ ಗ್ರಾಮಗಳ ಗಡಿ ಭಾಗದಲ್ಲಿ ಕೆಮ್ಮಿಂಜೆ ಗ್ರಾಮದ ಆರ್‌ಟಿಸಿಯನ್ನೊಳಗೊಂಡು ೧೫ ಎಕರೆ ಜಾಗವನ್ನು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಕ್ಕೆ ಗುರುತಿಸಲಾಗಿದೆ. ಪುತ್ತೂರಿನ ೨ನೇ ಅತಿ ದೊಡ್ಡ ತಾಲೂಕು ಕ್ರೀಡಾಂಗಣವಾಗಿ ಇದು ನಿರ್ಮಾಣಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ತಾಲೂಕಿನ ಮುಂಡೂರು ಗ್ರಾಮದ ನೈತಾಡಿ ಎಂಬಲ್ಲಿ ೧೫ ಎಕರೆ ವಿಸ್ತೀರ್ಣದ ಬೃಹತ್ತಾದ ಸುವ್ಯವಸ್ಥಿತ ತಾಲೂಕು ಕ್ರೀಡಾಂಗಣ ನಿರ್ಮಾಣಗೊಳ್ಳಲಿದ್ದು, ಈ ಜಾಗದ ದಾಖಲೆ ಪತ್ರವನ್ನು ಶನಿವಾರ ಶಾಸಕರ ಕಚೇರಿಯಲ್ಲಿ ಯುವಸಬಲೀಕರಣ ಕ್ರೀಡಾ ಇಲಾಖೆಗೆ ಶಾಸಕ ಅಶೋಕ್ ಕುಮಾರ್ ರೈ ಹಸ್ತಾಂತರಿಸಿದರು.

ಪುತ್ತೂರು ತಾಲೂಕಿನ ಮುಂಡೂರು ಮತ್ತು ನೈತ್ತಾಡಿ ಗ್ರಾಮಗಳ ಗಡಿ ಭಾಗದಲ್ಲಿ ಕೆಮ್ಮಿಂಜೆ ಗ್ರಾಮದ ಆರ್‌ಟಿಸಿಯನ್ನೊಳಗೊಂಡು ೧೫ ಎಕರೆ ಜಾಗವನ್ನು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಕ್ಕೆ ಗುರುತಿಸಲಾಗಿದೆ. ಪುತ್ತೂರಿನ ೨ನೇ ಅತಿ ದೊಡ್ಡ ತಾಲೂಕು ಕ್ರೀಡಾಂಗಣವಾಗಿ ಇದು ನಿರ್ಮಾಣಗೊಳ್ಳಲಿದೆ.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು ಪುತ್ತೂರಿನಲ್ಲಿ ಯಾವುದೆ ವ್ಯವಸ್ಥಿತವಾದ ಕ್ರೀಡಾಂಗಣವಿಲ್ಲ. ಆದರೆ ಕ್ರೀಡೆಯಲ್ಲಿ ಎಷ್ಟೋ ಜನ ಸಾಧನೆ ಮಾಡಿದವರು ಪುತ್ತೂರಿನಲ್ಲಿ ಇದ್ದಾರೆ. ಅವರ ಸಾಧನೆಗೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಿದ್ದೇವೆ. ಈಜು, ಕರಾಟೆ, ಅಥ್ಲೆಟಿಕ್, ಕಬಡ್ಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದವರು ಪುತ್ತೂರಿನಲ್ಲಿದ್ದಾರೆ. ಈ ಮೈದಾನದಲ್ಲಿ ಸಿಂಥೆಟಿಕ್ ಟ್ರ‍್ಯಾಕ್, ಬಾಸ್ಕೆಟ್ ಬಾಲ್, ಶಟಲ್, ಸ್ಟ್ರೇಟಿಂಗ್, ಇಂಡೋರ್ ಗೇಮ್ಸ್‌ಗೆ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಕೋಚ್‌ಗಳ ಮೂಲಕ ತರಬೇತಿ ಕೊಡಿಸಬಹುದು. ಈಗಾಗಲೇ ರಾಜ್ಯ ಸರಕಾರದಿಂದ ೮ ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ದಿನ ಆವರಣಗೋಡೆ ನಿರ್ಮಾಣ ಆಗಲಿದೆ. ಹಂತ ಹಂತವಾಗಿ ೮ ಕೋಟಿ ರು. ಅನುದಾನದಲ್ಲಿ ಸಿಂಥೆಟಿಕ್ ಟ್ರ‍್ಯಾಕ್ ಮತ್ತು ಗ್ಯಾಲರಿ ಮಾಡಲು ಅನುದಾನ ಬಳಸಿಕೊಳ್ಳಲಾಗುವುದು. ಕೇಂದ್ರ ಸರಕಾರಕ್ಕೆ ಖೇಲೋ ಇಂಡಿಯಾ ಯೋಜನೆಯಲ್ಲಿ ೨೨ ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ೮ ಕೋಟಿ ಒಲಂಪಿಕ್ ಮಾದರಿಯ ಇಂಡೋರ್ ಈಜುಕೊಳ, ಇಂಡೋರ್ ಗೇಮ್ಸ್ ಕೂಡಾ ಮಾಡಲಾಗುವುದು ಎಂದು ತಿಳಿಸಿದರು. ಕ್ರೀಡಾಂಗಣ ಸ್ಥಳದ ದಾಖಲೆ ಪತ್ರವನ್ನು ಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಅಕ್ರಮ ಸಕ್ರಮ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ ಮತ್ತಿತರರು ಉಪಸ್ಥಿತರಿದ್ದರು.