ಕೆಂಪುಕಲ್ಲು, ಮರಳಿಲ್ಲದೆ ನಿರ್ಮಾಣ ಕ್ಷೇತ್ರ ಸ್ಥಗಿತ: ಭರವಸೆ ಈಡೇರದಿದ್ದರೆ ಪ್ರತಿಭಟನೆ ಅನಿವಾರ್ಯ

| Published : Jul 18 2025, 12:45 AM IST

ಕೆಂಪುಕಲ್ಲು, ಮರಳಿಲ್ಲದೆ ನಿರ್ಮಾಣ ಕ್ಷೇತ್ರ ಸ್ಥಗಿತ: ಭರವಸೆ ಈಡೇರದಿದ್ದರೆ ಪ್ರತಿಭಟನೆ ಅನಿವಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬೇಕಾದ ನೈಸರ್ಗಿಕ ಸಂಪತ್ತಾದ ಉತ್ಕೃಷ್ಟ ಗುಣಮಟ್ಟದ ಮರಳು ಹಲವು ವರ್ಷಗಳಿಂದ ಲಭ್ಯವಾಗದೆ ಗುತ್ತಿಗೆದಾರರು ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಒಂದೂವರೆ ತಿಂಗಳಿನಿಂದ ಕಾನೂನಿನ ನೆಪವೊಡ್ಡಿ ಕೆಂಪು ಮುರಕಲ್ಲಿನ ಗಣಿಗಾರಿಕೆ ನಿರ್ಬಂಧಿಸಿರುವ ಕಾರಣ ಮತ್ತಷ್ಟು ಸಮಸ್ಯೆಯಾಗಿದೆ ಎಂದು .ಕ. ಜಿಲ್ಲಾ ಸಿವಿಲ್‌ ಗುತ್ತಿಗೆದಾರರ ಸಂಘ ಅಧ್ಯಕ್ಷ ಮಹಾಬಲ ಕೊಟ್ಟಾರಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ 45 ದಿನಗಳಿಂದ ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಲಭ್ಯವಾಗದೆ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದಾಗಿ ನಿರ್ಮಾಣ ಕಾರ್ಮಿಕರ ಜತೆಗೆ ಈ ಉದ್ಯಮವನ್ನು ನಂಬಿರುವ ಇತರ ಕ್ಷೇತ್ರದ ಕಾರ್ಮಿಕರು, ಉದ್ಯಮಿಗಳು ಆರ್ಥಿಕವಾಗಿ ತೊಂದರೆಗೀಡಾಗಿದ್ದಾರೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನೀಡಿರುವ ಭರವಸೆಯಂತೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ದ.ಕ. ಜಿಲ್ಲಾ ಸಿವಿಲ್‌ ಗುತ್ತಿಗೆದಾರರ ಸಂಘ ಹೇಳಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬೇಕಾದ ನೈಸರ್ಗಿಕ ಸಂಪತ್ತಾದ ಉತ್ಕೃಷ್ಟ ಗುಣಮಟ್ಟದ ಮರಳು ಹಲವು ವರ್ಷಗಳಿಂದ ಲಭ್ಯವಾಗದೆ ಗುತ್ತಿಗೆದಾರರು ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಒಂದೂವರೆ ತಿಂಗಳಿನಿಂದ ಕಾನೂನಿನ ನೆಪವೊಡ್ಡಿ ಕೆಂಪು ಮುರಕಲ್ಲಿನ ಗಣಿಗಾರಿಕೆ ನಿರ್ಬಂಧಿಸಿರುವ ಕಾರಣ ಮತ್ತಷ್ಟು ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ಬಗ್ಗೆ ಹಲವು ವರ್ಷಗಳಿಂದ ಸರ್ಕಾರ ಪ್ರತಿನಿಧಿಗಳು ಹೇಳುತ್ತಾ ಬಂದಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೆಂಪ ಕಲ್ಲು ಸಿಗದೆ ನಿರ್ಮಾಣ ಕ್ಷೇತ್ರದಲ್ಲಿ ತಲ್ಲಣವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಮಹಡಿ ಮನೆಗಳನ್ನು ಕಾಂಕ್ರಿಟ್‌ ಪಿಲ್ಲರ್‌ ಇಲ್ಲದೆ ಕೇವಲ ಕೆಂಪು ಕಲ್ಲು ಬಳಸಿ ನಿರ್ಮಿಸುತ್ತಾರೆ. ಇದರಿಂದ ಮಧ್ಯಮ ಹಾಗೂ ಬಡ ವರ್ಗದ ಜನರ ಮನೆಯ ಕನಸಿಗೆ ತೊಂದರೆಯಾಗಿದೆ ಎಂದರು.

ಗುತ್ತಿಗೆದಾರರು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ದುಡಿಮೆಯ ಪಾಲನ್ನು ಭರಿಸುತ್ತಿದ್ದಾರೆ. ಇದೀಗ ನಮ್ಮ ಜಿಲ್ಲೆಯ ಕಾರ್ಮಿಕ ವರ್ಗವಲ್ಲದೆ, ಹೊರ ಜಿಲ್ಲೆ, ರಾಜ್ಯಗಳ ಕಾರ್ಮಿಕರು ಕೂಡಾ ಕೆಲಸವಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.

ಸಂಘದ ಜತೆ ಕಾರ್ಯದರ್ಶಿ ಲಕ್ಷ್ಮಿ ಪ್ರಸಾದ್‌, ಕೋಶಾಧಿಕಾರಿ ಸುರೇಶ್‌, ಸದಸ್ಯರಾದ ಚಂದನ್‌, ಕೇಶವ ಚನ್ನಪ್ಪ ಮತ್ತಿತರರಿದ್ದರು.

ಬಾಕ್ಸ್‌ಗಳು---

ಸ್ಯಾಂಡ್‌ ಬಜಾರ್‌ ಆ್ಯಪ್‌ನಲ್ಲಿ ದುಬಾರಿ, ಕಳಪೆ ಮರಳು!

ಜಿಲ್ಲಾಡಳಿತ ಸ್ಯಾಂಡ್‌ ಬಜಾರ್‌ ಆ್ಯಪ್‌ ಮೂಲಕ ಮರಳು ಪಡೆಯಲು ಹೇಳುತ್ತಿದೆ. ಆದರೆ ಆ್ಯಪ್‌ನಲ್ಲಿ ಮರಳು ಲಭ್ಯವಾಗುತ್ತಿಲ್ಲ. ಮಾತ್ರವಲ್ಲ ಗಣಿ ಇಲಾಖೆಯವರು ಈ ಬಗ್ಗೆ ಸ್ಪಂದಿಸುತ್ತಿಲ್ಲ. ಆ್ಯಪ್‌ ಮೂಲಕ ಸಿಗುವ ಮರಳಿನ ದರ ದುಬಾರಿಯಾಗಿದ್ದು, ಮರಳಿನ ಗುಣಮಟ್ಟ ಮನೆ ನಿರ್ಮಾಣಕ್ಕೆ ಪೂರಕವಾಗಿಲ್ಲ. ಈ ಮೂಲಕ ಖರೀದಿಸುವ ಮರಳಲ್ಲಿ ಶೇ.50ರಷ್ಟು ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ದುಬಾರಿ ದರದಲ್ಲಿ ಗುತ್ತಿಗೆದಾರರಾದ ನಾವು ನಮ್ಮ ಗ್ರಾಹಕರಿಗೆ ನಿಗದಿಪಡಿಸಿದ ದರದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಾಗದು ಎಂದು ಉಪಾಧ್ಯಕ್ಷ ಸತೀಶ್‌ ಕುಮಾರ್‌ ಹೇಳಿದರು.]ನಿಯಮ ಸರಳೀಕರಣಗೊಳಿಸಿ

ಕೆಂಪು ಕಲ್ಲು ಗಣಿಗಾರಿಕೆ ಈ ಹಿಂದೆ ಅಕ್ರಮವಾಗಿ ನಡೆಯುತ್ತಿದ್ದರೆ ಆ ಸಂದರ್ಭದಲ್ಲಿ ಅದನ್ನು ತಡೆದು ಕ್ರಮ ಕೈಗೊಳ್ಳದಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾರಣ. ಆದರೆ ಇದೀಗ ಏಕಾಏಕಿಯಾಗಿ ಸಂಪೂರ್ಣವಾಗಿ ಕಲ್ಲು ಕೋರೆಗಳನ್ನು ಬಂದ್‌ ಮಾಡಿಸಿದರೆ ನಿರ್ಮಾಣ ಕಾಮಗಾರಿಯ ಕಾರ್ಮಿಕರ ಜತೆಗೆ ಕಲ್ಲು ಕೋರೆಯಲ್ಲಿ ಕಾರ್ಮಿಕರಾಗಿ ದುಡಿಯುವವರ ಪರಿಸ್ಥಿತಿ ಏನು ಎಂದು ಕಾರ್ಯದರ್ಶಿ ಅಶೋಕ್‌ ಕುಲಾಲ್‌ ಪ್ರಶ್ನಿಸಿದರು. ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಕಾನೂನು ಬದ್ಧವಾಗಿ ನೀತಿಗಳನ್ನು ಸರಳೀಕರಿಸಿಕೊಂಡು ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

-------------------