ಸಾರಾಂಶ
ಬಪ್ಪನಾಡು ಕ್ಷೇತ್ರದಲ್ಲಿ ಒಂಭತ್ತು ಮಾಗಣೆಯ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಹಾಗೂ ಪ್ರಾಯಶ್ಚಿತ್ತ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನದ ಅನುವಂಶಿಕ ಮೊಕ್ತೇಸರ, ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಲ್ಕಿಬಪ್ಪನಾಡು ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಸೂಚಿಸಿದಂತೆ ಮುಂದಿನ ದಿನಗಳಲ್ಲಿ ಒಂಭತ್ತು ಮಾಗಣೆಯ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಹಾಗೂ ಪ್ರಾಯಶ್ಚಿತ್ತ ಕಾರ್ಯಗಳು ನಡೆಯಲಿವೆ ಎಂದು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ, ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು ಹೇಳಿದ್ದಾರೆ.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಜ್ಞಾನಮಂದಿರದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಪ್ರಸ್ತಾಪಗೊಂಡ ಧಾರ್ಮಿಕ ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳ ಕುರಿತು ನಡೆದ ಮೂಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಆ.31ರಂದು ಮುಷ್ಟಿ ಕಾಣಿಕೆ ಸಮರ್ಪಣೆ ನೆರವೇರಲಿದೆ ಎಂದು ಅವರು ಮಾಹಿತಿ ನೀಡಿದರು.ಯದು ನಾರಾಯಣ ಶೆಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ನೂತನ ರಥ ನಿರ್ಮಾಣ, ಕ್ಷೇತ್ರಪಾಲ ಗುಡಿ. ರಥ ಬೀದಿ ನಿರ್ಮಾಣ, ಗರ್ಭಗುಡಿ ನವೀಕರಣ ಮತ್ತಿತರ ಜೀರ್ಣೋದ್ದಾರ ಕಾರ್ಯ ಸೇರಿದಂತೆ ಸುಮಾರು 18 ಕೋಟಿ ರು. ವೆಚ್ಚ ತಗಲಲಿದ್ದು ಮುಂದಿನ 4 ವರ್ಷ ಅವಧಿ ಬೇಕಾಗಿದೆ. ದೇಶ, ವಿದೇಶಗಳಲ್ಲಿರುವ ಕ್ಷೇತ್ರದ ಭಕ್ತರ ಸಹಕಾರ ಸಿಕ್ಕಿದಲ್ಲಿ ಸಾಧ್ಯವಾಗಲಿದೆಯೆಂದು ಹೇಳಿದರು.ಕ್ಷೇತ್ರದ ಸುನೀಲ್ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ಕೊಲ್ನಾಡು ರಾಮಚಂದ್ರ ನಾಯಕ್ ಮಾತನಾಡಿ, 2006ರಲ್ಲಿ ಜೀರ್ಣೋದ್ದಾರ ನಡೆದ ಸಂದರ್ಭದಲ್ಲಿ ಕೆಲವೊಂದು ವ್ಯತ್ಯಾಸಗಳಾಗಿರುವ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದು ಆ.21 ಮತ್ತು 22ರಂದು ವಾಸ್ತು ತಜ್ಞರು ದೇವಳಕ್ಕೆ ಭೇಟಿ ನೀಡಿ ಪರಾಮರ್ಶೆ ಮಾಡಲಿದ್ದಾರೆ ಎಂದರು.ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕ್ಕಳ, ಕ್ಷೇತ್ರದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ, ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಶ್ವೇತ ಪಳ್ಳಿ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಅಶೋಕ್ ಸುವರ್ಣ ಮತ್ತಿತರರು ಮಾತನಾಡಿದರು.ಕ್ಷೇತ್ರದ ಪವಿತ್ರ ಪಾಣಿ ಅತ್ತೂರು ಬೈಲು ಉಡುಪರು, ಕ್ಷೇತ್ರದ ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಪಾವಂಜೆ ವಾಸುದೇವ ಭಟ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಶರತ್ ಎನ್ ಸಾಲ್ಯಾನ್, ಅತುಲ್ ಕುಡ್ವ , ನಾಗೇಶ್ ಬಪ್ಪನಾಡು ಮತ್ತಿತರರಿದ್ದರು. ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಶ್ವೇತ ಪಳ್ಳಿ ಸ್ವಾಗತಿಸಿದರು, ಸುನೀಲ್ ಆಳ್ವ ನಿರೂಪಿಸಿದರು.