ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರ ಸಂರಕ್ಷಣೆಗೆ ದೃಷ್ಟಿಯಿಂದ ಯುವ ಸಮೂಹ ಜೀವನ ಕ್ರಮ ಬದಲಾಯಿಸಿಕೊಂಡು ಕನಸುಗಳನ್ನು ಕಾಣಬೇಕು ಎಂದು ಪರಿಸರವಾದಿ ಯು.ಎನ್. ರವಿಕುಮಾರ್ ತಿಳಿಸಿದರು.ನಗರದ ಎಂಜಿನಿಯರುಳ ಸಂಸ್ಥೆಯ ಸಭಾಂಗಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್.ಎಲ್.ಎಚ್.ಪಿ) ಹಾಗೂ ಕರ್ನಾಟಕ ಸ್ಟೇಟ್ ಯೂತ್ ನೆಟ್ ವರ್ಕ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮೈಸೂರು ಜಿಲ್ಲೆಯ ಪರಿಸರ ಸಂರಕ್ಷಣೆಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕ ಪಾಲ್ಗೊಳ್ಳುವಿಕೆ ಕುರಿತು ಸಮಾಲೋಚನಾ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಪರಿಸರದ ಮೇಲೆ ದೈವ ಭಕ್ತಿ ಹೊಂದಿದ್ದರು. ಸುತ್ತಮುತ್ತಲಿನ ಪರಿಸರದೊಂದಿಗೆ ಹೊಂದಿಕೆ ಮಾಡಿಕೊಂಡು ಜೀವನ ನಡೆಸಿ, ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅದರಲ್ಲಿಯೂ ಯುವ ಸಮೂಹ ಪರಸರ ಸಂರಕ್ಷಣೆಗೆ ಹೆಚ್ಚು ಶ್ರಮಿಸಬೇಕಿದೆ ಎಂದು ಅವರು ಹೇಳಿದರು.ವಾಯು ಮಾಲಿನ್ಯ ತಡೆಗಟ್ಟಿ
ಕಳೆದ ಕೆಲವು ದಿನಗಳ ಹಿಂದೆ ಮೈಸೂರಿನ ಗಾಳಿಯ ಶುದ್ಧತೆ ಕ್ಷೀಣಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮೈಸೂರು ನೂರಾರು ವರ್ಷಗಳ ವೃಕ್ಷ ಪರಂಪರೆ ಹೊಂದಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಮರ-ಗಿಡಗಳನ್ನು ಬೆಳೆಸುವ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಅವರು ಕರೆ ನೀಡಿದರು.ವಾಹನಗಳನ್ನು ಹಿತಿಮಿತಿಯಿಂದ ಬಳಸಬೇಕು. ಹೆಚ್ಚು ಹೊಗೆ ಹರಡುವ ವಾಹನಗಳನ್ನು ಬಳಸಬಾರದು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಹೊರ ದೇಶಗಳಲ್ಲಿ ಸೈಕಲ್ ಬಳಸಲಾಗುತ್ತಿದೆ. ಮೈಸೂರಿನಲ್ಲೂ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಯಿತು. ಆದರೆ, ಸಾರ್ವಜನಿಕರು ಸಹಕಾರ ನೀಡಲಿಲ್ಲ. ಧಾವಂತದ ವೇಗದ ಬದುಕಿನಿಂದ ಮಣ್ಣು, ನೀರು, ಗಾಳಿ ಎಲ್ಲವನ್ನು ನಿರ್ಲಕ್ಷ್ಯಿಸಿ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಆರ್.ಎಲ್.ಎಚ್.ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ, ಕೃಷಿ ಅವಲಂಬಿತ ದೇಶದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಶೇ.40 ರಷ್ಟು ಮಂದಿ ಕೃಷಿ ವಿಮುಖರಾಗಿದ್ದಾರೆ. ಯುವಕರಂತೂ ವ್ಯವಸಾಯದಿಂದ ದೂರವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಪ್ರಗತಿಪರ ಚಿಂತಕ ಡಾ.ಕೆ. ಕಾಳಚೆನ್ನೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ, ನಗರ ಪಾಲಿಕೆ ವೈದ್ಯಾಧಿಕಾರಿ ಡಾ. ವೆಂಕಟೇಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿ.ಎಂ. ಪ್ರಭುಸ್ವಾಮಿ, ವಲಯ ಅರಣ್ಯಾಧಿಕಾರಿ ಡಿ.ಸಿ. ರಾಧಾ, ಆರ್.ಎಲ್.ಎಚ್.ಪಿ ಕಾರ್ಯದರ್ಶಿ ಪ್ರೊ.ವಿ.ಕೆ. ಜೋಸ್, ಯೂತ್ ನೆಟ್ ವರ್ಕ್ ಸದಸ್ಯ ಮಹೇಶ್ ಮೊದಲಾದವರು ಇದ್ದರು.
----ಕೋಟ್...
ಕಳೆದ 50 ವರ್ಷಗಳ ಹಿಂದಿನ ಪರಿಸರ ಸ್ವಚ್ಛತೆಯಿಂದ ಕೂಡಿತ್ತು. ಶುದ್ಧವಾದ ಗಾಳಿ, ನೀರು ಕಲುಷಿತಗೊಂಡಿವೆ. ಅಭಿವೃದ್ಧಿ, ನಾಗರಿಕತೆ ಹೆಸರಿನಲ್ಲಿ ಪರಿಸರ ನಾಶ ಮಾಡುವ ಕೆಲಸವಾಗುತ್ತಿದೆ. ಹೀಗಾಗಿ, ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು.- ಯು.ಎನ್. ರವಿಕುಮಾರ್, ಪರಿಸರವಾದಿ