ಗ್ರಾಹಕರ ಕುಂದುಕೊರತೆಗೆ ವರದಾನ ಗ್ರಾಹಕರ ಆಯೋಗ!

| Published : May 01 2025, 12:47 AM IST

ಸಾರಾಂಶ

ಗ್ರಾಹಕರ ಅಳಲು ಕೇಳಲು, ಸೇವಾ ನ್ಯೂನತೆ ಎಸಗಿದ ಕಂಪನಿಗೆ ತಕ್ಕ ಪಾಠ ಕಲಿಸಲು ಗ್ರಾಹಕ ಕುಂದುಕೊರತೆ, ಪರಿಹಾರ ಆಯೋಗ ಪರಿಣಾಮಕಾರಿಯಾಗಿ ಕಾರ್ಯ ಮಾಡುತ್ತಿದೆ. ಧಾರವಾಡ ಜಿಲ್ಲೆಯಲ್ಲಂತೂ ನ್ಯಾಯಾಧೀಶ ಈಶಪ್ಪ ಭೂತೆ ನೇತೃತ್ವದಲ್ಲಿ ಗ್ರಾಹಕರಿಗೆ ಶೀಘ್ರ ಹಾಗೂ ಪರಿಣಾಮಕಾರಿಯಾಗಿ ನ್ಯಾಯ ದೊರೆಯುತ್ತಿರುವುದು ವಿಶೇಷ ಸಂಗತಿ.

ಬಸವರಾಜ ಹಿರೇಮಠ ಧಾರವಾಡಆಧುನಿಕ ಯುಗದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ಪಾದನಾ ಕಂಪನಿಗಳು ಏನೆಲ್ಲಾ ಕಸರತ್ತು ಮಾಡುತ್ತವೆ. ತರಹೇವಾರಿ ಜಾಹೀರಾತು ಸೇರಿದಂತೆ ಗ್ರಾಹಕರು ವಸ್ತುಗಳನ್ನು ಕೊಳ್ಳಲು ಭಗೀರಥ ಪ್ರಯತ್ನ ಮಾಡುತ್ತಾರೆ. ಉತ್ಪನ್ನ ಮಾರಲು ಕಂಪನಿಗಳು ತೋರಿದ ಉತ್ಸಾಹ ಅವುಗಳಿಗೆ ಒದಗಿಸುವ ಸೇವೆ ಅಥವಾ ದುರಸ್ತಿ ಸಮಯದಲ್ಲಿ ಇರುವುದಿಲ್ಲ.ಈ ನಿಟ್ಟಿನಲ್ಲಿ ಗ್ರಾಹಕರ ಅಳಲು ಕೇಳಲು, ಸೇವಾ ನ್ಯೂನತೆ ಎಸಗಿದ ಕಂಪನಿಗೆ ತಕ್ಕ ಪಾಠ ಕಲಿಸಲು ಗ್ರಾಹಕ ಕುಂದುಕೊರತೆ, ಪರಿಹಾರ ಆಯೋಗ ಪರಿಣಾಮಕಾರಿಯಾಗಿ ಕಾರ್ಯ ಮಾಡುತ್ತಿದೆ. ಧಾರವಾಡ ಜಿಲ್ಲೆಯಲ್ಲಂತೂ ನ್ಯಾಯಾಧೀಶ ಈಶಪ್ಪ ಭೂತೆ ನೇತೃತ್ವದಲ್ಲಿ ಗ್ರಾಹಕರಿಗೆ ಶೀಘ್ರ ಹಾಗೂ ಪರಿಣಾಮಕಾರಿಯಾಗಿ ನ್ಯಾಯ ದೊರೆಯುತ್ತಿರುವುದು ವಿಶೇಷ ಸಂಗತಿ.

200ಕ್ಕೂ ಹೆಚ್ಚು ಪ್ರಕರಣ ವಿಲೇವಾರಿ: ಸೇವೆಗಳಲ್ಲಿನ ಲೋಪಗಳು, ಪಾವತಿ ಮಾಡುವಲ್ಲಿ ವಿಳಂಬ, ಹಕ್ಕುಗಳನ್ನು ತಿರಸ್ಕರಿಸುವುದು ಅಥವಾ ಇನ್ನಾವುದೇ ಸೇವಾ ನ್ಯೂನತೆ ಸಮಯದಲ್ಲಿ ಜಿಲ್ಲಾ ಗ್ರಾಹಕರ ಆಯೋಗವು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಮೂಲಕ ಕೆಲವು ಮಹತ್ವದ ತೀರ್ಪುಗಳನ್ನು ನೀಡಿದೆ. ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲಿನ ಆಯೋಗಗಳಿಗೆ ಹೋಲಿಸಿದರೆ ಜಿಲ್ಲೆಯ ಆಯೋಗವು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ನ್ಯಾಯಾಧೀಶ ಈಶಪ್ಪ ಭೂತೆ ಅವರ 33 ವರ್ಷಗಳ ಕಾನೂನು ಅನುಭವಕ್ಕೆ ಹಿಡಿದ ಕೈಗನ್ನಡಿ ಇದು. ವಿಶೇಷ ಎಂದರೆ, ಜಿಲ್ಲಾ ಆಯೋಗ ನೀಡಿದ ತೀರ್ಪುನ್ನು ರಾಜ್ಯ ಗ್ರಾಹಕರ ಆಯೋಗ ಎತ್ತಿಹಿಡಿದಿದೆ. ಕಳೆದ ನಾಲ್ಕು ವರ್ಷಗಳಿಂದ ಆಯೋಗವು ಪ್ರತಿವರ್ಷ 200ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡುತ್ತಿದೆ.

2021ರಲ್ಲಿ 166 ಪ್ರಕರಣಗಳು ದಾಖಲಾಗಿದ್ದು, 2022ರಲ್ಲಿ ಅದು 245ಕ್ಕೆ ಏರಿತು, 2023ರಲ್ಲಿ 501 ಪ್ರಕರಣಗಳಿಗೆ ಮತ್ತಷ್ಟು ಏರಿತು ಮತ್ತು ಕಳೆದ ವರ್ಷ ಆಯೋಗವು 537 ಪ್ರಕರಣಗಳನ್ನು ಸ್ವೀಕರಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ 103 ಪ್ರಕರಣಗಳು ದಾಖಲಾಗಿವೆ. ಶೇ. 99ರಷ್ಟು ಪ್ರಕರಣಗಳಲ್ಲಿ ಗ್ರಾಹಕರಿಗೆ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದ ನ್ಯಾಯಾಧೀಶ ಈಶಪ್ಪ ಭೂತೆ, ಆಯೋಗವು 2022ರಲ್ಲಿ 212, 2023ರಲ್ಲಿ 409, 2024ರಲ್ಲಿ 186 ಮತ್ತು 2025ರಲ್ಲಿ 32 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ನಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ, ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ಧಾರವಾಡ ಆಯೋಗಕ್ಕೆ ಅತ್ಯುತ್ತಮ ಆಯೋಗ ಪ್ರಶಸ್ತಿಯನ್ನು ನೀಡಿದೆ ಎಂದರು.ಜನರ ಕುಂದುಕೊರತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಆಯೋಗದ ಕರ್ತವ್ಯ. ಆ ಮೂಲಕ ಅನ್ಯಾಯದ ವ್ಯಾಪಾರಕ್ಕೆ ತಡೆಯೊಡ್ಡುವುದು ನಮ್ಮ ಕರ್ತವ್ಯ. 2019ರಿಂದ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಸರಳೀಕರಿಸಲಾಗಿದೆ ಮತ್ತು ನೊಂದ ಪಕ್ಷವು ವಿರುದ್ಧ ಪಕ್ಷದ ಪ್ರಾದೇಶಿಕ ಕಚೇರಿ ಇರುವ ಯಾವುದೇ ಆಯೋಗದಲ್ಲಿ ತಮ್ಮ ಪ್ರಕರಣಗಳನ್ನು ದಾಖಲಿಸಬಹುದು. ಖಾಸಗಿ ಬೀಜ ಕಂಪನಿಯೊಂದರ ಕಳಪೆ ಬೀಜದ ಪರಿಣಾಮ ಶಿರಸಿಯ ಸುಮಾರು 500 ರೈತರು ಅಡಕೆ ನಷ್ಟ ಅನುಭವಿಸಿದ್ದರು. ಬೀಜ ಕಂಪನಿಯ ಪ್ರಾದೇಶಿಕ ಕಚೇರಿ ಹುಬ್ಬಳ್ಳಿಯಲ್ಲಿ ಇದ್ದ ಕಾರಣ ಅವರು ಧಾರವಾಡ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಅರ್ಹತೆಯನ್ನು ಅಧ್ಯಯನ ಮಾಡಿದ ನಂತರ, ಆಯೋಗವು ರೈತರಿಗೆ ನಷ್ಟವನ್ನು ಸರಿದೂಗಿಸಲು ಬೀಜ ಕಂಪನಿಗೆ ಆದೇಶಿಸಿತು.

ಇತ್ತೀಚೆಗೆ ಹೆಚ್ಚಿನ ಪ್ರಕರಣಗಳಲ್ಲಿ ಖಾಸಗಿ ವಿಮಾ ಕಂಪನಿಗಳು ಜನರನ್ನು ದಾರಿ ತಪ್ಪಿಸುತ್ತಿವೆ. ಸುಮಾರು ಶೇ. 65ರಷ್ಟು ದೂರುಗಳು ವಿಮಾ ಇತ್ಯರ್ಥಕ್ಕೆ ಸಂಬಂಧಿಸಿವೆ. ರಿಯಲ್ ಎಸ್ಟೇಟ್ ಏಜೆಂಟ್‌ಗಳು ನಿವೇಶನಗಳನ್ನು ಅಭಿವೃದ್ಧಿಪಡಿಸುವ ಅಥವಾ ಮನೆಗಳನ್ನು ನಿರ್ಮಿಸುವ ಭರವಸೆ ನೀಡುತ್ತಾರೆ. ಆದರೆ, ನಿರ್ದಿಷ್ಟ ಸಮಯದಲ್ಲಿ ತಲುಪಿಸುವುದಿಲ್ಲ. ಇದು ಮುಂದಿನ ದೊಡ್ಡ ಸಮಸ್ಯೆಯಾಗಬಹುದು ಎಂದ ನ್ಯಾಯಾಧೀಶರು ಮಾಹಿತಿ ನೀಡಿದರು.ಅನ್ಯಾಯದ ವ್ಯಾಪಾರ ನಡೆಸುತ್ತಿರುವ ಉತ್ಪಾದನಾ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಮೋಸ ಹೋದ ಗ್ರಾಹಕರಿಗೆ ಪರಿಹಾರ ಒದಗಿಸಲು ಸಾರ್ವಜನಿಕರು ಇನ್ನಷ್ಟು ಗ್ರಾಹಕ ಕಾಯ್ದೆಯ ಬಗ್ಗೆ ಜ್ಞಾನ ಪಡೆಯಬೇಕು. ಈ ಮೂಲಕ ತಮಗಾದ ಅನ್ಯಾಯವನ್ನು ಆಯೋಗ ಮೂಲಕ ಪ್ರಶ್ನಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಗ್ರಾಹಕರ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹೇಳಿದರು.