ರೈತನಿಗೆ ಗುಣಮಟ್ಟದ ಪೈಪ್ ಪೂರೈಸಲು ಗ್ರಾಹಕರ ಆಯೋಗ ಸೂಚನೆ

| Published : Nov 01 2023, 01:00 AM IST / Updated: Nov 01 2023, 01:01 AM IST

ರೈತನಿಗೆ ಗುಣಮಟ್ಟದ ಪೈಪ್ ಪೂರೈಸಲು ಗ್ರಾಹಕರ ಆಯೋಗ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಣಮಟ್ಟದ ಪಿವಿಸಿ ಪೈಪ್‌ಗಳನ್ನು ಪೂರೈಸದೇ ಇರುವ ಹುಬ್ಬಳ್ಳಿಯ ರಾಮದೇವ ಪ್ಲಾಸ್ಟಿಕ್ ಅಂಗಡಿ ಮಾಲೀಕರಿಗೆ ಖರೀದಿ ಮಾಡಿದ ರೈತನಿಗೆ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಪೂರೈಸಬೇಕು, ಇಲ್ಲವಾದರೆ ಅದರ ಮೊತ್ತವನ್ನು ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಗುಣಮಟ್ಟದ ಪಿವಿಸಿ ಪೈಪ್‌ಗಳನ್ನು ಪೂರೈಸದೇ ಇರುವ ಹುಬ್ಬಳ್ಳಿಯ ರಾಮದೇವ ಪ್ಲಾಸ್ಟಿಕ್ ಅಂಗಡಿ ಮಾಲೀಕರಿಗೆ ಖರೀದಿ ಮಾಡಿದ ರೈತನಿಗೆ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಪೂರೈಸಬೇಕು, ಇಲ್ಲವಾದರೆ ಅದರ ಮೊತ್ತವನ್ನು ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಮಲ್ಲಿಕಾರ್ಜುನ ರಾಯಪ್ಪ ಬಿಜಾಪುರ ಅವರು ತಮ್ಮ ಜಮೀನಲ್ಲಿ ಕೊಳವೆ ಬಾವಿಕೊರೆಸುವ ಉದ್ದೇಶದಿಂದ ಹುಬ್ಬಳ್ಳಿಯ ರಾಮದೇವ ಪ್ಲಾಸ್ಟಿಕ್‌ನಲ್ಲಿ ೧೬, ಡಿಸೆಂಬರ್ ೨೦೨೨ರಂದು ೧೮೦ ಎಂಎಂ ಅಳತೆಯ ೬ ಕೆಜಿ ಸಾಮರ್ಥ್ಯದ ಐದು ಪಿವಿಸಿ ಪೈಪ್‌ಗಳನ್ನು ಹಾಗೂ ೯೦ ಎಂಎಂ ಅಳತೆಯ ಆರು ಕೆಜಿ ಸಾಮರ್ಥ್ಯದ ೫೦ ಪಿವಿಸಿ ಪೈಪ್‌ಗಳನ್ನು ₹೩೭ಸಾವಿರಕ್ಕೆ ಖರೀಸಿದ್ದರು. ಆದರೆ ರಾಮದೇವ ಪ್ಲಾಸ್ಟಿಕ್‌ನವರು ₹೧೯,೪೭೦ಕ್ಕೆ ಮಾತ್ರ ಬಿಲ್ ನೀಡಿದ್ದರು. ಇದನ್ನು ವಿಚಾರಿಸಲಾಗಿ ನಮ್ಮ ಪೈಪ್‌ಗಳಿಗೆ ಏನೂ ಆಗುವುದಿಲ್ಲ. ನಿಮಗೆ ಬಿಲ್ಲಿನ ಅವಶ್ಯಕತೆ ಬರುವುದಿಲ್ಲ ಎಂದು ಹೇಳಿದ್ದರು.

ಮಲ್ಲಿಕಾರ್ಜುನ ರಾಯಪ್ಪ ಬಿಜಾಪುರ ತಮ್ಮ ಜಮೀನಿನಲ್ಲಿ ಪೈಪ್ ಅಳವಡಿಸಿ ನೀರು ಸರಬರಾಜು ಮಾಡಲು ಕೊಳವೆಬಾವಿ ಚಾಲು ಮಾಡಿದಾಗ ಎಲ್ಲಾ ಪೈಪ್‌ಗಳು ಒಡೆದು ಹೋಗಿದ್ದವು. ಅವರು ಒಡೆದ ಪೈಪ್‌ಗಳನ್ನು ತೋರಿಸಿ ಉತ್ತಮ ಗುಣಮಟ್ಟದ ಪೈಪ್ ಕೊಡುವಂತೆ ಕೇಳಿದಾಗ ರಾಮದೇವ ಪ್ಲಾಸ್ಟಿಕ್‌ನವರು ಸ್ಪಂದಿಸದ ಹಿನ್ನೆಲೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್. ಈಶ್ವರಪ್ಪ ಹಾಗೂ ಸದಸ್ಯೆ ಉಮಾದೇವಿ ಎಸ್. ಹಿರೇಮಠ ನೇತೃತ್ವದ ತಂಡ, ಗ್ರಾಹಕನಿಗೆ ಉತ್ತಮ ಗುಣಮಟ್ಟದ ಪಿವಿಸಿ ಪೈಪ್‌ಗಳನ್ನು ನೀಡಬೇಕು ಅಥವಾ ಪೈಪ್ ಖರೀದಿಗೆ ಪಾವತಿಸಿದ ₹೩೭ ಸಾವಿರವನ್ನು ಶೇ.೬ರ ಬಡ್ಡಿ ಸಹಿತ ೩೦ ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.೯ ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.