ವಸ್ತುಗಳ ಖರೀದಿಗೆ ಗ್ರಾಹಕರು ಜಾಗೃತಿ ವಹಿಸಿ: ಪಿ.ಮುರಳೀಮೋಹನ್ ರೆಡ್ಡಿ

| Published : Dec 29 2023, 01:32 AM IST

ವಸ್ತುಗಳ ಖರೀದಿಗೆ ಗ್ರಾಹಕರು ಜಾಗೃತಿ ವಹಿಸಿ: ಪಿ.ಮುರಳೀಮೋಹನ್ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಿ.ಮುರಳೀಮೋಹನ್ ರೆಡ್ಡಿ ಮಾತನಾಡಿದ್ದು, ಅನೇಕರು ಅಂತಹ ಜಾಹೀರಾತುಗಳನ್ನು ನಂಬಿ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಹಕರು ಇಂತಹ ಜಾಲಗಳಿಗೆ ಬಲಿಯಾಗದೆ ಜಾಗೃತ ವಹಿಸಿ ವಸ್ತುಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವಕರುನ್ನು ಸಹ ಹಾದಿ ತಪ್ಪಿಸುವ ಜಾಹೀರಾತುಗಳನ್ನು ಬರುತ್ತಿವೆ. ಅನೇಕರು ಅಂತಹ ಜಾಹೀರಾತುಗಳನ್ನು ನಂಬಿ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಹಕರು ಇಂತಹ ಜಾಲಗಳಿಗೆ ಬಲಿಯಾಗದೆ ಜಾಗೃತ ವಹಿಸಿ ವಸ್ತುಗಳನ್ನು ಖರೀದಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳೀಮೋಹನ್ ರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಇತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಕಂಪನಿ ವಸ್ತುಗಳನ್ನು ಉಚಿತವಾಗಿ ಕೊಡುವುದಿಲ್ಲ, ಆದ್ದರಿಂದ ಯಾವುದೇ ಜಾಹೀರಾತು, ಹಾಗೂ ಅಪರಿಚಿತ ಲಿಂಕ್‌ಗಳ ಮೂಲಕ ವಸ್ತುಗಳನ್ನು ಖರೀದಿಸದೆ ಅದರ ಸಂಪೂರ್ಣ ಮಾಹಿತಿ ತಿಳಿದು ನಂತರ ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸುನಂದ ಎಸ್.ಕಾದ್ರೊಳ್ಳಿಮಠ ಮಾತನಾಡಿ, ಗ್ರಾಹಕರು ಯಾವುದೇ ವಸ್ತು ಖರೀದಿಸುವ ಮುನ್ನ ಅದರ ಗುಣಮಟ್ಟ, ಯೋಗ್ಯ ಬೆಲೆ ಕೂಲಂಹಕುಷವಾಗಿ ಪರೀಕ್ಷಿಸಿ ಖರೀದಿಸಬೇಕು. ಜೊತೆಗೆ ಕಡ್ಡಾಯವಾಗಿ ರಶೀದಿ (ಬಿಲ್) ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷರು ಹಾಗೂ ನ್ಯಾಯವಾದಿ ಎನ್. ಆರ್.ಲಾತೂರ ಅವರು

ಇ- ಕಾಮರ್ಸ್ ಮತ್ತು ಡಿಜಿಟಲ್ ಯುಗದಲ್ಲಿ ಆನಲೈನ್ ವ್ಯವಹಾರದಿಂದ ಸಮಯ ಉಳಿತಾಯ ಮಾಡುವ ಭರದಲ್ಲಿ ಹೆಚ್ಚಿನ ಸಮಸ್ಯೆಗಳಿಗೆ ಸಿಲುಕಿ ಗ್ರಾಹಕರು ಆರ್ಥಿಕ ನಷ್ಟಕ್ಕೆ ಅನುಭವಿಸಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಆದ್ದರಿಂದ ಗ್ರಾಹಕರು ವಸ್ತು ಖರೀದಿಸುವಾಗ ಹೆಚ್ಚಿನ ಗಮನ ಹರಿಸುವುದು ಅವಶ್ಯಕ ಎಂದು ತಿಳಿಸಿದರು.

ಗ್ರಾಹಕರ ಹಕ್ಕುಗಳ ಕರಪತ್ರ ಬಿಡುಗಡೆ:

ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳನ್ನು ಕುರಿತು ಕರಪತ್ರಗಳನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸುನಂದ ಎಸ್. ಕಾದ್ರೊಳ್ಳಿಮಠ ಬಿಡುಗಡೆ ಮಾಡಿದರು.

ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಗಿರೀಶ್ ಪಾಟೀಲ, ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ, ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ ಸದಸ್ಯೆ ಪೂರ್ಣಿಮಾ ಪಟ್ಟಣಶೆಟ್ಟಿ, ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂ.ಬಿ.ಎ ವಿಭಾಗದ ನಿರ್ದೇಶಕ ಡಾ. ಸೂರ್ಯಕುಮಾರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಆರ್. ಐ ಬಿಸಗುಪ್ಪಿ, ಮಹಿಳಾ ಕಲ್ಯಾಣ ಸಂಸ್ಥೆ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಉಪಸ್ಥಿತರಿದ್ದರು ಹಾಗೂ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಹಾಜರಿದ್ದರು.