ಸಾರಾಂಶ
ರಾಣಿಬೆನ್ನೂರು: ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ಮೇಘಾ ಭೂತೆ ತಿಳಿಸಿದರು.ನಗರದ ಕೆಎಲ್‌ಇ ಸಂಸ್ಥೆಯ ರಾಜ- ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ- ಗ್ರಾಹಕರ ಸಂರಕ್ಷಣಾ ಕಾಯ್ದೆ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಒಂದು ವೇಳೆ ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾದಲ್ಲಿ ಅದಕ್ಕಿರುವ ಪರಿಹಾರ ವೇದಿಕೆಗಳು ಮತ್ತು ದೂರುಗಳನ್ನು ಸಲ್ಲಿಸುವ ವಿಧಾನದ ಬಗ್ಗೆ ಹಾಗೂ ಗ್ರಾಹಕರು ಸರಕು ಮತ್ತು ಸೇವೆಗಳನ್ನು ಖರೀದಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು ಹಾಗೂ ಸಂಗ್ರಹಿಸಬೇಕಾದ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಪ್ರಾ. ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸುಜಾತ ಹುಲ್ಲೂರ, ಪ್ರೊ. ವೀರಣ್ಣ ಸಿ.ಕೆ., ಪ್ರೊ. ವಿದ್ಯಾಶ್ರೀ ದಾಮೋದರ, ಪ್ರೊ. ರೇಖಾ ಶಿಡೇನೂರ, ಪ್ರೊ. ಸಾಯಿಲತಾ ಮಡಿವಾಳರ, ಸೌಮ್ಯ, ಪೂರ್ಣಿಮಾ, ಅಶ್ವಿನಿ ಮೆಹರವಾಡೆ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್ ಮುಚ್ಚುತ್ತಿರುವುದು ಖಂಡನೀಯ
ಹಾವೇರಿ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಹಾಗೂ ಅನುದಾನದ ನೆಪವೊಡ್ಡಿ ಶ್ರೀ ಕಲ್ಮೇಶ್ವರ ಎನ್‌ಜಿಒ ಸಂಸ್ಥೆಯು ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್‌ಅನ್ನು ಮುಚ್ಚುತ್ತಿರುವುದು ಖಂಡನೀಯ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಅಂಗವಿಕಲರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕೆಂದು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಂಗಪ್ಪ ದಾಸರ ಒತ್ತಾಯಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಗವಿಕಲರಿಗಾಗಿ ಕೆಲಸ ಮಾಡುವ ಸಂಸ್ಥೆಯು ಅಂಗವಿಕಲರ ಪೋಷಣೆ, ರಕ್ಷಣೆ, ಶಿಕ್ಷಣ, ತರಬೇತಿ, ಪುನಶ್ಚೇತನದ ಉದ್ದೇಶವನ್ನು ಇಟ್ಟುಕೊಂಡು ಸಂಸ್ಥೆಯನ್ನು ಆರಂಭಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಂಸ್ಥೆ ನಿರ್ವಹಣೆಗಾಗಿ ಲಕ್ಷಾಂತರ ರು. ಅನುದಾನ ಪಡೆದುಕೊಂಡಿದ್ದಾರೆ. ಇದನ್ನು ಪುನಶ್ಚೇತನಗೊಳಿಸದೇ ಅನುದಾನ ನೆಪ ಹಾಗೂ ಕಡಿಮೆ ಸಂಖ್ಯೆ ಇದೆ ಎಂಬ ಕಾರಣಕ್ಕೆ ಅಂಗವಿಕಲ ಮಹಿಳೆಯರನ್ನು ಹೊರಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.ಇಷ್ಟು ದಿನ ಹಾಸ್ಟೆಲ್ ಸೌಲಭ್ಯ ಪಡೆದು ಈಗ ಒಮ್ಮಿಂದೊಮ್ಮೆಲೆ ಮುಚ್ಚುವುದಾಗಿ ನೆಪ ಹೇಳಿದ್ದರಿಂದ ವಸತಿ ನಿಲಯದಲ್ಲಿದ್ದ ಅಂಗವಿಕಲ ಮಹಿಳೆಯರು, ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. ಸಂಸ್ಥೆ ಅಂಗವಿಕಲರಿಗೆ ಆಸರೆಯಾಗಬೇಕೆ ಹೊರತು ಮಾರಕವಾಗಬಾರದು. ಕೂಡಲೇ ಜಿಲ್ಲಾಡಳಿತ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.ವಿದ್ಯಾರ್ಥಿನಿ ಹೇಮಾ ಪ್ರಕಾಶ ಮಾತನಾಡಿ, ಕಳೆದ ಫೆಬ್ರವರಿಯಲ್ಲಿ ಹಾಸ್ಟೆಲ್‌ನಿಂದ ಹೊರಹಾಕಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿದ್ದರು. ಈಗ ಪುನಃ ಹಾಸ್ಟೆಲ್ ಮುಚ್ಚುವ ನೋಟಿಸ್ ಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಜಿಲ್ಲೆಯಲ್ಲಿ ಅಂಗವಿಕಲರ ಪುನರ್ವಸತಿ ಕೇಂದ್ರದ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಅವರು, ಅಂಗವಿಕಲರ ಹಾಸ್ಟೆಲ್‌ನಲ್ಲಿ ಭ್ರಷ್ಟಾಚಾರದ ವಾಸನೆ ಹರಡುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದರು.ಡಿವೈಎಫ್‌ಐ ಕಾರ್ಯದರ್ಶಿ ಬಸವರಾಜ ಪೂಜಾರ ಅವರು ಹಾಸ್ಟೆಲ್‌ನಲ್ಲಿ ಒಬ್ಬರು, ಇಬ್ಬರು, ಎಷ್ಟೇ ವಿದ್ಯಾರ್ಥಿಗಳು ಇರಲಿ, ವಸತಿನಿಲಯ ನಡೆಸಬೇಕು. ನಡೆಸಲು ಆಗದಿದ್ದರೆ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗಿರಿಜಾ ಗೌಳಿ, ತಿಪ್ಪೇಸ್ವಾಮಿ ಹೊಸಮನಿ, ವಿದ್ಯಾರ್ಥಿಗಳಾದ ರೇಖಾ, ಸುಮಾ ಇದ್ದರು.