ಸಾರಾಂಶ
ಹೊಸದುರ್ಗ : ಬಾಡೂಟ ಸೇವಿಸಿದ್ದ ಸುಮಾರು 50ಕ್ಕೂ ಹೆಚ್ಚು ಜನರು ಅಸ್ವಸ್ತಗೊಂಡ ಘಟನೆ ತಾಲೂಕಿನ ಹಳೆಕುಂದೂರು ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಸ್ಥಳಕ್ಕೆ ಹೊಸದುರ್ಗ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿ ಭೇಟಿ ನೀಡಿ ಅಸ್ವಸ್ತಗೊಂಡವರಿಗೆ ಚಿಕಿತ್ಸೆ ನೀಡಿದರು.
ಘಟನೆ ವಿವರ: ಹಳೆ ಕುಂದೂರು ಗ್ರಾಮದ ವ್ಯಕ್ತಿಯೋರ್ವರ ಮಗಳ ಮದುವೆ ಸಂಭ್ರಮದಲ್ಲಿ ಬುಧವಾರ ರಾತ್ರಿ ಬಾಡೂಟ ಮಾಡಿಸಲಾಗಿತ್ತು. ರಾತ್ರಿ ಬಾಡೂಟ ಸೇವಿಸಿದ್ದವರ ಪೈಕಿ ಇಬ್ಬರು ಗುರುವಾರ ಅಸ್ವಸ್ಥಗೊಂಡಿದ್ದಾರೆ. ಶುಕ್ರವಾರ ಸುಮಾರು 10 ಜನರು ಅಸ್ವಸ್ಥಗೊಂಡು ಬಾಗೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಶನಿವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸುಮಾರು 50 ಕ್ಕೂ ಹೆಚ್ಚು ಜನರು ವಾಂತಿ ಭೇದಿಗೆ ತುತ್ತಾಗಿದ್ದು ಮಾಹಿತಿ ತಿಳಿಯುತ್ತಿದ್ದಂತೆ ತಾಲೂಕು ಸಂಚಾರಿ ಆರೋಗ್ಯ ಘಟಕ ಸಿಬ್ಬಂದಿ ಗ್ರಾಮಕ್ಕೆ ಬೇಟಿ ನೀಡಿ ಅಲ್ಲಿನ ಶಾಲೆಯಲ್ಲಿ ಕ್ಲಿನಿಕ್ ತೆರೆದು ಚಿಕಿತ್ಸೆ ಕೊಡಲಾಗುತ್ತಿದೆ. ಅದರೆ ಇಷ್ಟೊಂದು ಜನರು ಅಸ್ವಸ್ಥಗೊಳ್ಳಲು ಬಾಡೂಟ ಕಾರಣವೇ ಅಥವಾ ಕಲುಷಿತ ನೀರಿನ ಸೇವನೆ ಕಾರಣವೇ ಎಂದು ತಿಳಿದುಬಂದಿಲ್ಲ.
ಮೇಲ್ನೋಟಕ್ಕೆ ಬಾಡೂಟ ಕಾರಣ ಎನ್ನಲಾಗುತ್ತಿದ್ದು ಬಾಡೂಟ ಮಾಡಿ 3 ದಿನಗಳಾಗಿರುವ ಕಾರಣ ಸ್ಯಾಂಪಲ್ ಸಿಕ್ಕಿಲ್ಲ. ನೀರಿನ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ ಎಂದು ಸ್ಥಳದಲ್ಲಿದ್ದ ಅರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ವಾಂತಿ ಭೇದಿಗೆ ತುತ್ತಗಿದ್ದರೂ ತಾಲೂಕು ಅರೋಗ್ಯಧಿಕಾರಿ ರಾಘವೇಂದ್ರ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿಲ್ಲ ಎನ್ನಲಾಗಿದೆ. ಇಂತಹ ಗಂಭೀರ ಪರಿಸ್ಥಿಯಲ್ಲೂ ತಾಲೂಕು ಆರೋಗ್ಯಧಿಕಾರಿಗಳ ವರ್ತನೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಈ ಬಗ್ಗೆ ಮಾಹಿತಿ ಕೇಳಲು ಪತ್ರಕರ್ತರು ದೂರವಾಣಿ ಕರೆ ಮಾಡಿದರೆ ಫೋನ್ ಸ್ವಿಚ್ ಆಪ್ ಆಗಿದೆ.