ನಿತ್ಯ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಬಳಕೆ ಅವಶ್ಯ

| Published : Jan 11 2025, 12:45 AM IST

ಸಾರಾಂಶ

ಹೊಸಕೋಟೆ: ಮನುಷ್ಯನ ನಿತ್ಯ ಜೀವನದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಬಳಸುವ ಮೂಲಕ ಸಮತೋಲನದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಕಲಾವತಿ ತಿಳಿಸಿದರು.

ಹೊಸಕೋಟೆ: ಮನುಷ್ಯನ ನಿತ್ಯ ಜೀವನದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಬಳಸುವ ಮೂಲಕ ಸಮತೋಲನದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಕಲಾವತಿ ತಿಳಿಸಿದರು.

ನಗರದ ಚನ್ನಬೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜದ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ನಮ್ಮ ಚಿತ್ತ ಸಿರಿಧಾನ್ಯದತ್ತ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ದೇಹಕ್ಕೆ ಎಲ್ಲಾ ರೀತಿಯ ಪೌಷ್ಟಿಕಾಂಶ ಹೊಂದಿರುವ ಸಿರಿಧಾನ್ಯ ಬಹುಪಯೋಗ ಹೊಂದಿದೆ. ಪೌಷ್ಟಿಕಾಂಶ ಮತ್ತು ಆರೋಗ್ಯ ಸಮಸ್ಯೆಗಳ ನಿವಾರಿಸುವ ಶಕ್ತಿ ಸಿರಿಧಾನ್ಯ ಹೊಂದಿದೆ. ರಾಗಿ, ಜೋಳ, ಸಜ್ಜೆ, ಹಾರಕ, ನವಣೆ ಸಾಮೆ, ಊದಲು, ಕೊರಲು, ಬರಗು ಇತ್ಯಾದಿ ಸಿರಿಧಾನ್ಯ ಆಹಾರದಲ್ಲಿ ಬಳಸಲು ನಾಗರಿಕರಿಗೆ ಅರಿವು ಮೂಡಿಸಬೇಕು ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯದಲ್ಲಿ ಸಿರಿತನ ಹೊಂದಬೇಕಾದರೆ ಸಿರಿಧಾನ್ಯ ಕಡ್ಡಾಯವಾಗಿ ಬಳಸಬೇಕು. ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಮತ್ತು ರೈತರು ಮಾರಾಟಗಾರರು ರಫ್ತುದಾರರಿಗೆ ಅವಕಾಶ ಒದಗಿಸಲು ಸರ್ಕಾರಳೇ ಮೇಳಗಳನ್ನು ಆಯೋಜಿಸಬೇಕು ಎಂದರು.

ನಗರದ ಚನ್ನಭೈರೇಗೌಡ ಕ್ರೀಡಾಂಗಣದಿಂದ ಪ್ರಾರಂಭವಾದ ಸಿರಿಧಾನ್ಯ ನಡಿಗೆ ಬಿಇಒ ಕಚೇರಿ, ಜೆಸಿ ವೃತ್ತ, ಹಳೆ ಬಸ್ ನಿಲ್ದಾಣ, ಕೆಇಬಿ ಕಚೇರಿ ಮೂಲಕ ಕ್ರೀಡಾಂಗಣ ತಲುಪಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್, ಜಿಲ್ಲಾ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಗಾಯತ್ರಿ, ತಾಪಂ ಇಒ ಡಾ.ನಾರಾಯಣಸ್ವಾಮಿ, ತಾಲೂಕು ಕೃಷಿ ಅಧಿಕಾರಿ ಚಂದ್ರಪ್ಪ, ಬಿಇಒ ಪದ್ಮನಾಭ, ಕೃಷಿಕ ಸಮಾಜದ ಗೌರವಾಧ್ಯಕ್ಷ ಕೃಷ್ಣಪ್ಪ, ಖಜಾಂಚಿ ಹಸಿಗಾಳ ಸೋಮಶೇಖರ್ ಹಾಜರಿದ್ದರು.

ಫೋಟೋ : 2 ಹೆಚ್‌ಎಸ್‌ಕೆ 2

ಹೊಸಕೋಟೆಯಲ್ಲಿ ಜಿಲ್ಲಾ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಮ್ಮ ಚಿತ್ತ ಸಿರಿಧಾನ್ಯದತ್ತ ಕಾರ್ಯಕ್ರಮವನ್ನು ಕೃಷಿಕ ಸಮಾಜದ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಉದ್ಘಾಟಿಸಿದರು.