ಪೌಷ್ಟಿಕ ಆಹಾರ ಸೇವನೆ ಸದೃಢ ಆರೋಗ್ಯಕ್ಕೆ ಪೂರಕ

| Published : Sep 26 2024, 10:20 AM IST

ಸಾರಾಂಶ

ಗೌರಿಬಿದನೂರು: ಹಸಿರು ಎಲೆಗಳ ತರಕಾರಿಗಳು ಎಲ್ಲಾ ಮುಖ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಅತ್ಯವಶ್ಯಕ. ಭಾರತದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಸಿರು ಎಲೆ ತರಕಾರಿಗಳನ್ನು ತಿನ್ನಲಾಗುತ್ತದೆ. ಅದರಲ್ಲಿ ಜನಪ್ರಿಯವಾದವೆಂದರೆ ಪಾಲಕ್ ಸೊಪ್ಪು, ದಂಟಿನ ಸೊಪ್ಪು, ಪುಂಡಿಪಲ್ಯ , ಮೆಂತ್ಯೆ ಸೊಪ್ಪು, ನುಗ್ಗೆ ಸೊಪ್ಪು, ಪುದೀನ ಸೊಪ್ಪುಗಳಾಗಿವೆ. ನಿತ್ಯ ಪೌಷ್ಟಿಕ ಅಹಾರ ಸೇವನೆಯಿಂದ ನಮ್ಮ ದೇಹ ಸದೃಢವಾಗಿರಲು ಸಾಧ್ಯ, ಈ ನಿಟ್ಟಿನಲ್ಲಿ ತಾಜಾ ಹಣ್ಣು, ತರಕಾರಿ ಸೇವಿಸಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ಗೀತಾ ಕುಂಬಾರ್ ತಿಳಿಸಿದರು.

ನಗರದ ಎಸ್.ಎಸ್‌.ಇ.ಎ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರಸಭೆ ಅರೋಗ್ಯ ಇಲಾಖೆ ಸಂಯುಕ್ತ ಅಶ್ರಯದಲ್ಲಿ ‘ಪೌಷ್ಟಿಕ ಆಹಾರ ಸಪ್ತಾಹ ಬಗ್ಗೆ ಮತ್ತು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ. ಸಚಿನ್ ಮಾತನಾಡಿ, ಇವತ್ತಿನ ಕಾಲಘಟ್ಟದಲ್ಲಿ ಜನ ಆಧುನಿಕತೆಗೆ ತಕ್ಕಂತೆ ತಮ್ಮ ಆಹಾರ ಪದ್ಧತಿಯನ್ನೂ ಬದಲಾಯಿಸಿಕೊಂಡಿದ್ದಾರೆ. ನಾವು ಸೇವಿಸುವ ಯಾವುದೇ ಆಹಾರದಲ್ಲಿ ಕಾರ್ಬೋ ಹೈಡ್ರೇಟ್ಸ್‌, ಪ್ರೋಟೀನ್ಸ್‌, ಕಬ್ಬಿಣಾಂಶ, ಖನಿಜಾಂಶಗಳು ಹಾಗೂ ವಿಟಮಿನ್ಸ್‌ ಒಳಗೊಂಡ ಪೋಷಕಾಂಶಗಳಿರಬೇಕು. ಈ ಅಂಶಗಳು ಧಾನ್ಯಗಳು, ಕಾಳು, ಮಾಂಸ, ಮೀನು, ಮೊಟ್ಟೆ, ಹಾಲಿನ ಉತ್ಪನ್ನಗಳು, ಹಣ್ಣು ಮತ್ತು ತರಕಾರಿಗಳಲ್ಲಿ ದೊರೆಯಲಿವೆ. ಒಬ್ಬ ವ್ಯಕ್ತಿ ತನ್ನ ದೇಹದ ತೂಕಕ್ಕೆ ಅನುಗುಣವಾಗಿ ಪ್ರೋಟೀನ್‌ಗಳನ್ನು ತೆಗೆದುಕೊಳ್ಳಬೇಕು. ತಪ್ಪಿದರೆ ಹಲವು ಕಾಯಿಲೆಗಳಿಗೆ ತುತ್ತಾಗಲಿದ್ದಾರೆ. ಹಾಗಾಗಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ತಿಳಿಸಿದರು.

ಮಾನಸಿಕ ತಜ್ಞೆ ಲಾವಣ್ಯ ಮಾತನಾಡಿ, ಗರ್ಭಿಣಿಯರು ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಗು ಆರೋಗ್ಯವಾಗಿ ಹುಟ್ಟುತ್ತದೆ. ಅದರ ಜತೆಗೆ ತಾಯಿಯೂ ಆರೋಗ್ಯವಾಗಿದ್ದು, ಮುಂದೆ ಮಗುವಿನ ಬೆಳವಣಿಗೆಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಿದರು.

ಅತ್ಮಹತ್ಯೆ ಮಹಾಪಾಪ. ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇರುತ್ತದೆ, ಅದನ್ನು ನಾವು ಪಾಲಿಸಬೇಕು. ವಿದ್ಯಾರ್ಥಿಗಳು, ರೈತರು ಸಣ್ಣ ವಿಷಯಕ್ಕೆ ಅತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ, ಖಿನ್ನತೆ, ಬಡತನ, ಒಂಟಿತನ ಸಹ ಅತ್ಮಹತ್ಯೆ ಮಾಡಿಕೊಳ್ಳಲು ದಾರಿ ಅಗುತ್ತವೆ. ಆದ್ದರಿಂದ ಮನುಷ್ಯ ಯಾವಾಗಲು ಸಂಘಜೀವಿಯಾಗಿ ಜೀವನ ನಡೆಸಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಡಿ ಕೆ ಮಂಜುನಾಥಚಾರಿ ಮಾತನಾಡಿ, ನಾವು ಸದಾ ಒಳ್ಳೆಯ ವಿಚಾರಗಳು ಒಳ್ಳೆಯ ಅಹಾರ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಸಮಾಜದಲ್ಲಿ ರೈತ, ಕಾರ್ಮಿಕ ಎಲ್ಲ ರೀತಿಯ ನೌಕರರು ಜೀವನ ಮಾಡುತ್ತಿದ್ದಾರೆ, ತಮ್ಮ ಇಚ್ಛೆಯಂತೆ ನಾವು ಜೀವನ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್ ರೆಡ್ಡಿ, ವಕೀಲಸಂಘದ ಕಾರ್ಯದರ್ಶಿ ದಯಾನಂದ, ಉಪಾಧ್ಯಕ್ಷ ಟಿ.ಕೆ.ವಿಜಯರಾಘವ, ವಿ.ಗೋಪಾಲ್, ಪಿ.ಎಸೈ.ಗೋಪಾಲ್, ಕಾಲೇಜ್ ಪ್ರಾಂಶುಪಾಲ ಇ.ವಿ.ಶ್ರೀನಿವಾಸ್, ನ್ಯಾಯಾಲಯ ಸಿಬ್ಬಂದಿ ಗಂಗುಲಪ್ಪ ಮುಂತಾದವರು ಹಾಜರಿದ್ದರು.