ಸಾರಾಂಶ
ಸಿರಿಧಾನ್ಯ ಸರಿ ಉತ್ಪನ್ನಗಳ ಬಿಡುಗಡೆ - ಚಿತ್ರಕಲಾ ಸ್ಪರ್ಧೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಲಬೆರಕೆ ಆಹಾರ ಪದಾರ್ಥಗಳ ಹಾವಳಿಯಿಂದ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಿರಿಧಾನ್ಯ ಉತ್ಪನ್ನಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ನಗರದ ಪಾಂಚಜನ್ಯ ಸಭಾಂಗಣದಲ್ಲಿ ಬೆಳವಾಡಿಯ ತೃಪ್ತಿ ಸಿರಿಧಾನ್ಯ ಸರಿ ಸಂಸ್ಥೆ, ಚಿಕ್ಕಮಗಳೂರು ಆರ್ಟ್ ಸೊಸೈಟಿ ಹಾಗೂ ಚಿತ್ರಕಲಾ ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ತೃಪ್ತಿ ಸಿರಿಧಾನ್ಯ ಸರಿ ಉತ್ಪನ್ನಗಳ ಬಿಡುಗಡೆ ಹಾಗೂ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಕಲಬೆರಕೆ ಇಲ್ಲದ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ವ್ಯವಸ್ಥೆ ತಲುಪಿದೆ. ಮುಖಕ್ಕಿಂತ ಮುಖವಾಡಕ್ಕೆ ಹೆಚ್ಚು ಪ್ರಚಾರ ಸಿಗುವಂತಾಗಿದೆ. ನಮ್ಮ ಯೋಚನೆ ಮತ್ತು ವಿಚಾರ ಎರಡೂ ವ್ಯವಸ್ಥೆ ಹತ್ತಿರಕ್ಕಿರಬೇಕು ಎಂದು ಹೇಳಿದರು.ಕರ್ನಾಟಕ ಸರ್ಕಾರದಲ್ಲಿ ಆಹಾರ ಉತ್ಮನ್ನಗಳ ಗುಣಮಟ್ಟ ಪರೀಕ್ಷೆಗೆ 4 ಪ್ರಯೋಗಾಲಯಗಳಿವೆ. ಹಣ್ಣುಗಳಿಗೆ ವಿಷಯುಕ್ತ ರಾಸಾಯನಿಕಗಳನ್ನು ಬೆರೆಸಿ ಬಣ್ಣ ಹೆಚ್ಚಿಸುವುದು ಸೇರಿದಂತೆ ಇತರೆ ಕಲಬೆರಕೆಗಳನ್ನು ಅದು ಪರೀಕ್ಷಿಸಬೇಕು. ಆದರೆ, ಆ ನಾಲ್ಕೂ ಲ್ಯಾಬ್‌ಗಳು ಸಹ ಹಾಳಾಗಿವೆ. ಸರಿಯಾದ ವರದಿ ಕೊಡುವ ಸ್ಥಿತಿಯಲ್ಲಿಲ್ಲ ಎಂದು ವರದಿಗಳೇ ಹೇಳುತ್ತವೆ. ಈ ರೀತಿ ಹಾಳು ಮಾಡುವ ವರ್ಗವೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಿರಿಧಾನ್ಯ ಉತ್ಪನ್ನಗಳ ಬಳಕೆ ಸೂಕ್ತ ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಮ್ಮ ನಿಜವಾದ ಆಹಾರ ಪದ್ಧತಿ ಮರೆತ ಕಾರಣಕ್ಕೆ ಜಿಗಿದಾಡಬೇಕಾದ ವಯಸ್ಸಿನಲ್ಲೇ ಕಾಯಿಲೆ ತಂದುಕೊಳ್ಳುತ್ತಿದ್ದೇವೆ. ಆಹಾರ ಔಷಧಿ ಆಗುವ ಬದಲಿಗೆ, ಔಷಧಿಯೇ ಆಹಾರವಾಗಿ ಬದಲಾಗಿ ರುವ ಪರಿಣಾಮ ಇದು. ಮತ್ತೆ ಪ್ರಕೃತಿ ಜೊತೆಗೆ ನಮ್ಮ ಬದುಕನ್ನು ಪುನರ್ ಸ್ಥಾಪಿಸುವುದೊಂದೇ ಇರುವ ಪರಿಹಾರ ಎಂದು ಹೇಳಿದರು.ವಾತಾ, ಪಿತ್ತ, ಕಫ ಮೂರೂ ಸಮಚಿತ್ತದಲ್ಲಿದ್ದರೆ ನಮಗೆ ಇನ್ನಾವ ವೈದ್ಯರೂ ಬೇಕಿಲ್ಲ. ನಮ್ಮ ಆರೋಗ್ಯ ಕೆಟ್ಟಿತೆಂದು ಮೊದಲು ಸೂಚನೆ ಕೊಡುವುದೇ ಈ ಮೂರು ಸಂಗತಿ. ಅದನ್ನು ನಾವು ಆಹಾರದಲ್ಲೇ ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. ಆದರೆ, ದುರ್ದೈವ ಆಹಾರವನ್ನೂ ನಾವು ವಿಷಮಯ ಮಾಡಿ ಬಿಟ್ಟಿದ್ದೇವೆ. ಅಕ್ಕಿ, ತರಕಾರಿ, ಹಣ್ಣು ಬೆಳೆಯುವುದು ಮತ್ತು ಸಂಸ್ಕರಿಸುವ ವೇಳೆ ಬಳಸುವ ರಾಸಾಯನಿಕ ವಿಷವಾಗಿ ಪರಿಣಮಿಸುತ್ತಿದೆ. ಇದಕ್ಕೆ ಪರಿಹಾರ ಹುಡುಕಿಕೊಳ್ಳಬೇಕಿದೆ. ವಿಚಾರ, ಆಹಾರ ಮತ್ತು ವಿಹಾರಗಳನ್ನು ಸರಿಪಡಿಸಿ, ಆರೋಗ್ಯ ಸರಿಯಾಗಿಟ್ಟಿಕೊಳ್ಳಲು ಉತ್ತಮ ಮಾರ್ಗ ಎಂದು ಹೇಳಿದರು.ವಿಷಮಯ ಆಹಾರದಿಂದ ತಪ್ಪಿಸಿಕೊಳ್ಳುವ ಪುಟ್ಟ ಪ್ರಯತ್ನವನ್ನು ತೃಪ್ತಿ ಸಿರಿಧಾನ್ಯ ಸರಿ ಸಂಸ್ಥೆ ಮಾಡುತ್ತಿದೆ. ಅದನ್ನು ಪ್ರೋತ್ಸಾಹಿಸಿ ಆರೋಗ್ಯ ಸುರಕ್ಷತೆಗೆ ಆಧ್ಯತೆ ನೀಡೋಣ ಎಂದರು.ತೃಪ್ತಿ ಸಿರಿಧಾನ್ಯ ಸರಿ ಸಂಸ್ಥೆಯ ರವೀಂದ್ರ ಬೆಳವಾಡಿ ಮಾತನಾಡಿದರು. ಚಿಕ್ಕಮಗಳೂರು ಆರ್ಟ್ ಸೊಸೈಟಿ ಅಧ್ಯಕ್ಷೆ ಲತಾ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಅಧಿಕಾರಿ ಮನೋಜ್, ಜಂಟಿ ಕೃಷಿ ನಿರ್ದೇಶಕಿ ಎಚ್.ಎಲ್.ಸುಜಾತಾ, ಶಾಂತಿ ನಿಕೇತನ ಚಿತ್ರಕಲಾ ವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ, ಸಿರಿ ನೇಚರ್ಸ್ ರೂಟ್ಸ್‌ನ ರಮೇಶ್ ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು ಸ್ವಾಗತಿಸಿದರು. 3 ಕೆಸಿಕೆಎಂ 1ಚಿಕ್ಕಮಗಳೂರಿನ ಬಿಜೆಪಿಯ ಪಾಂಚಜನ್ಯ ಸಭಾಂಗಣದಲ್ಲಿ ನಡೆದ ತೃಪ್ತಿ ಸಿರಿಧಾನ್ಯ ಸರಿ ಉತ್ಪನ್ನಗಳ ಬಿಡುಗಡೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ರವೀಂದ್ರ ಬೆಳವಾಡಿ, ಜಂಟಿ ಕೃಷಿ ನಿರ್ದೇಶಕಿ ಸುಜಾತಾ, ಲತಾ ರವೀಂದ್ರ ಇದ್ದರು.