ಕಳೆದ ಕೆಲ ದಿನಗಳಿಂದ ಕಬ್ಬು ಕಡಿಯಲು ಆಗಮಿಸಿದ್ದ ಕೂಲಿ ಕಾರ್ಮಿಕರು ಮಾದರಹಳ್ಳಿ ಸಮೀಪದ ಕಬ್ಬಿನ ಗದ್ದೆ ಬಳಿ ಟೆಂಟ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಊಟ ಮಾಡಿದ ನಂತರ ಎಲ್ಲರಿಗೂ ವಾಂತಿ, ಕೆಮ್ಮ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ಕಲುಷಿತ ನೀರನ್ನು ಸೇವಿಸಿದ ಇಬ್ಬರು ಮಕ್ಕಳು ಸೇರಿದಂತೆ ೨೬ಕ್ಕೂ ಹೆಚ್ಚು ಮಂದಿ ಕಬ್ಬು ಕಡಿಯುವ ಕೂಲಿ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಮಾದರಹಳ್ಳಿ ಬಳಿ ನಡೆದಿದೆ.

ಮಹಾರಾಷ್ಟ್ರ ಮೂಲದವರಾದ ಅನಿಲ್ (೩೦), ರೋಹಿತ್ (೧೯), ಮುಖೇಶ್ (೩೫), ವಿಕಾಸ್ (೨೧), ಅರ್ಜುನ್ ಜಾದವ್ (೨೫), ಮನಿಷಾ ಗಾಯಕ್‌ವಾಡ್ (೨೮), ಸಂಗೀತಾ ಜಾದವ್ (೩೦), ರುಕ್ಮಾಬಾಯಿ (೫೦), ಲಕ್ಷ್ಮೀ (೩೦), ವೈಷ್ಣವಿ (೧೮), ಅಕ್ಕಾ ಪವರ್ (೪೦), ರೇಣುಕಾ (೩೦) ಸೇರಿದಂತೆ ೨೬ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಕಬ್ಬು ಕಡಿಯಲು ಆಗಮಿಸಿದ್ದ ಕೂಲಿ ಕಾರ್ಮಿಕರು ಮಾದರಹಳ್ಳಿ ಸಮೀಪದ ಕಬ್ಬಿನ ಗದ್ದೆ ಬಳಿ ಟೆಂಟ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಊಟ ಮಾಡಿದ ನಂತರ ಎಲ್ಲರಿಗೂ ವಾಂತಿ, ಕೆಮ್ಮ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಮಿಮ್ಸ್ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.

ಮೈಷುಗರ್ ಅಧ್ಯಕ್ಷ ಭೇಟಿ:

ಮಾಹಿತಿ ತಿಳಿದ ತಕ್ಷಣವೇ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಮಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕ್ಕೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬು ಕಡಿಯಲು ಆಗಮಿಸಿದ್ದ ಕಾರ್ಮಿಕರು ಕುಡಿಯುವ ನೀರನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗತ್ಯ ಚಿಕಿತ್ಸೆ ನೀಡುವಂತೆ ಮಿಮ್ಸ್ ನಿರ್ದೇಶಕರು ಮತ್ತು ವೈದ್ಯಕೀಯ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಎಲ್ಲರಿಗೂ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ದಿನ ಅವರನ್ನು ಆಸ್ಪತ್ರೆಯಲ್ಲೇ ಒಳರೋಗಿಗಳಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರಿಗೂ ಚಿಕಿತ್ಸೆ ನೀಡುವುದಾಗಿ ವೈದ್ಯರು ತಿಳಿಸಿದ್ದಾರೆಂದು ವಿವರಿಸಿದರು.

ಮೈಷುಗರ್ ಕಾರ್ಮಿಕ ಪರಿಹಾರ ನಿಧಿಯಿಂದ ಎಲ್ಲ ಕಾರ್ಮಿಕರಿಗೂ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಯಾವುದೇ ಆತಂಕ ಪಡುವಂತಹ ಅಗತ್ಯವಿಲ್ಲ. ಎಲ್ಲರಿಗೂ ಧೈರ್ಯ ತುಂಬುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಿದ್ದಾರೆ. ತಾವೂ ಸಹ ಅವರ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದೇನೆ ಎಂದರು.