ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರ: ನ್ಯಾ.ಸಿದ್ದರಾಮಪ್ಪ

| Published : Jun 27 2024, 01:10 AM IST

ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರ: ನ್ಯಾ.ಸಿದ್ದರಾಮಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾವನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಮಾದಕ ವಸ್ತುಗಳ ಸೇವನೆಯು ಮನುಷ್ಯನ ಆರೋಗ್ಯಕ್ಕೆ ಹಾನಿಕರವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಿದ್ದರಾಮಪ್ಪ ಕಲ್ಯಾಣರಾವ್ ಹೇಳಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾಸಿಕ ಆರೋಗ್ಯ ವಿಭಾಗ, ರಿಮ್ಸ್ ಆಸ್ಪತ್ರೆ, ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆ ಇವರಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. 1989ರಿಂದ ಪ್ರತಿವರ್ಷ ಜೂ.26ಅನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಒಂದೊಂದು ಘೋಷಣೆಯೊಂದಿಗೆ ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಪುರಾವೆಗಳು ಸ್ಪಷ್ಟವಾಗಿವೆ: ನಿವಾರಣೆಯಲ್ಲಿ ಹೂಡಿಕೆ ಮಾಡಿ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ಮೊಬೈಲ್ ಸೇರಿ ವಿದ್ಯುನ್ಮಾನ ಉಪಕರಣಗಳ ಅತಿಯಾದ ಬಳಕೆಯೂ ವ್ಯಸನವಾಗಿ ಪರಿಣಮಿಸಿದ್ದು, ಪೋಷಕರು ಈ ಬಗ್ಗೆ ಗಮನಹರಿಸಬೇಕು. ಯುವಕರು ಅಂತರ್ಜಾಲದಲ್ಲಿ ಅವಶ್ಯ ಇರುವ ಮಾಹಿತಿ ಪಡೆಯಬೇಕು. ಆದರೆ ಯುವಕರು ಅವಶ್ಯವಿಲ್ಲದ ಮಾಹಿತಿ ಪಡೆಯುವ ಮೂಲಕ ಯುವಕರು ಮಾದಕ ವಸ್ತುಗಳ ಕಡೆಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಅಧಿಕಾರಿ ಶಿವಕುಮಾರ, ರಿಮ್ಸ್ ನಿರ್ದೇಶಕ ಡಾ.ರಮೇಶ್ ಬಿ.ಎಚ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಜಿಲ್ಲಾ ಮಾಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಯಶೋದ ಎನ್, ಜಿಲ್ಲಾ ಸರ್ವಕ್ಷಣಾಧಿಕಾರಿ ಡಾ.ಗಣೇಶ, ಜಿಲ್ಲಾ ಮಾಸಿಕ ಆರೋಗ್ಯ ಹಿರಿಯ ಮನೋವೈದ್ಯ ಡಾ.ಮನೋಹರ ವೈ.ಪತ್ತಾರ, ಟಿಎಚ್ಒ ಪ್ರಜ್ವಲ್ ಕುಮಾರ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು. ನಿರೂಪಣೆಯನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ನೆರವೇರಿಸಿದರು.

ವಿದ್ಯಾರ್ಥಿಗಳಿಂದ ನಾಟಕ ಮೂಲಕ ಜಾಗೃತಿ

ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ಮುಂದೆ ರಿಮ್ಸ್ ಹಾಗೂ ವಿವಿಧ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಕುರಿತು ಬೀದಿ ನಾಟಕ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಮಾದಕ ವಸ್ತುಗಳ ಸೇವನೆ ಕುರಿತು ಘೋಷಣೆಗಳ ಮೂಲಕ ಜಾಥಾ ನಡೆಸಲಾಯಿತು.