ಸಾರಾಂಶ
ಬೆಂಗಳೂರು : ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಪೂರೈಕೆ ನಿಂತಿಲ್ಲ, ನಮ್ಮ ಯಾವ ಬೇಡಿಕೆಗಳೂ ಈಡೇರಿಲ್ಲ, ಹಾಸ್ಟೆಲ್ ವಾರ್ಡನ್ ದೌರ್ಜನ್ಯ ಮುಂದುವರೆದಿದೆ ಎಂದು ಆರೋಪಿಸಿ ಜ್ಞಾನಭಾರತಿ ಕ್ಯಾಂಪಸ್‌ನ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಗುರುವಾರ ರಾತ್ರಿ ಮತ್ತೇ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಈ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಕೆಲ ತಿಂಗಳಿಂದ ಕಲುಷಿತ ಆಹಾರ ಪೂರೈಸಲಾಗುತ್ತಿದೆ. ಇದರಿಂದ ನಿತ್ಯ ವಿದ್ಯಾರ್ಥಿಗಳು ಹೊಟ್ಟೆನೋವು, ವಾಂತಿ, ಭೇದಿ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಬಗ್ಗೆ ಸೋಮವಾರ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರಾದರೂ ಯಾವುದೂ ಸರಿಯಾಗಿಲ್ಲ. ಹಾಸ್ಟೆಲ್ ಅಧಿಕಾರಿಗಳ ದೌರ್ಜನ್ಯವೂ ನಿಂತಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.
ಅನೇಕ ಬಾರಿ ದವಸ ಧಾನ್ಯಗಳು ಕೊಳೆತ, ಹುಳ ಆಗಿರುವ ಆಹಾರವನ್ನೇ ಅಡುಗೆಗೆ ಬಳಿಸಿದ್ದಾರೆ. ತಟ್ಟೆಯಲ್ಲಿ ಹುಳ ಸಿಕ್ಕಾಗ ಅಧಿಕಾರಿಗಳ ಗಮನಕ್ಕೆ ಹುಳ ತೆಗೆದು ತಿನ್ನಿರಿ ಏನು ಸಾಯುವುದಿಲ್ಲ ಎಂದು ಉಡಾಪೆಯ ಮಾತುಗಳನ್ನಾಡಿದ್ದಾರೆ. ಅನಾರೋಗ್ಯದಿಂದ ಕೆಲ ವಿದ್ಯಾರ್ಥಿಗಳ ಹಾಸ್ಟೆಲ್ ಬಿಟ್ಟು ವಿಶ್ರಾಂತಿಗಾಗಿ ಊರು ಸೇರಿದ್ದಾರೆ. ಆದರೂ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.