ಭಟ್ಕಳ: ಪಟ್ಟಣದ ಆಸರಕೇರಿ ಪ್ರದೇಶದಲ್ಲಿ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಕಲುಷಿತ ನೀರು ಅಂತರ್ಜಲದ ಮೂಲಕ ಕುಡಿಯುವ ನೀರಿನ ಬಾವಿಗೆ ಸೇರುತ್ತಿದ್ದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಆಸರಕೇರಿಯ ಶ್ರೀ ವೆಂಕಟೇಶ್ವರ ನಾಮಧಾರಿ ಅಭಿವೃದ್ಧಿ ಸಂಘದಿಂದ ನಗರಸಭೆಯ ಪೌರಾಯುಕ್ತ ಬಾಬಾ ಸಾಹೇಬ ಮಾನೆ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಆಸರಕೇರಿ ಪ್ರದೇಶದಲ್ಲಿ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಕಲುಷಿತ ನೀರು ಕುಡಿಯುವ ನೀರಿನ ಬಾವಿಗೆ ಸೇರ್ಪಡೆಯಾಗಿ ಜನರ ಆತಂಕಕ್ಕೆ ಕಾರಣವಾಗಿದೆ. ಕಲುಷಿತ ನೀರು ಸೇವನೆಯಿಂದ ಗ್ರಾಮದ ಮಕ್ಕಳು ಸೇರಿದಂತೆ ಹಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಳೆದ ಐದಾರು ವರ್ಷಗಳಿಂದ ಆಸರಕೇರಿಯ ಸಾರ್ವಜನಿಕರು ಒಳಚರಂಡಿ ಸಮಸ್ಯೆ ಅನುಭವಿಸುತ್ತಾ ಬಂದಿದ್ದರೂ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ. ಭಟ್ಕಳ ನಗರ ಭಾಗದ ಎತ್ತರ ಪ್ರದೇಶದಲ್ಲಿರುವ ಬಂದರ ರಸ್ತೆಯ ಒಳಚರಂಡಿಯ ಅತಿಯಾದ ನೀರು ಸೋನಾರಕೇರಿ ಮಾರ್ಗದ ಮೂಲಕ ಆಸರಕೇರಿ ಭಾಗಕ್ಕೆ ಹರಿಸಲಾಗುತ್ತಿದೆ. ಅಲ್ಲಿಂದ ಮುಂದೆ ಸಾಗಲು ಸರಿಯಾದ ವ್ಯವಸ್ಥೆ ಇರದ ಕಾರಣ ನಿರಂತರವಾಗಿ ಆಸರಕೇರಿ ಭಾಗದ ಕುಡಿಯುವ ನೀರಿನ ಬಾವಿಗಳು ಕಲುಷಿತಗೊಳ್ಳುತ್ತಿದೆ. ನಗರಸಭೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಮತ್ತೊಂದು ಇಲಾಖೆಯ ಅಧಿಕಾರಿಗಳ ಮೇಲೆ ಆರೋಪ ಹೊರಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಒಂದು ವಾರದಲ್ಲಿ ಬಗೆಹರಿಸಬೇಕು. ಮೇಲಿನ ಪ್ರದೇಶದಿಂದ ಅತಿಯಾದ ಕಲುಷಿತ ನೀರಿನ ಮಾರ್ಗವನ್ನು ಸೋನಾರಕೇರಿ ಭಾಗದಲ್ಲಿ ಬದಲಾವಣೆ ಮಾಡಿ ಅದನ್ನು ಮುಖ್ಯರಸ್ತೆ ಒಳಚರಂಡಿ ಭಾಗಕ್ಕೆ ಅಳವಡಿಸಬೇಕೆಂದು ಆಗ್ರಹಿಸಲಾಗಿದೆ. ಸಮಸ್ಯೆ ಶೀಘ್ರದಲ್ಲಿ ಬಗೆಹರಿಸದೇ ಇದ್ದಲ್ಲಿ ಸೋನಾರಕೇರಿ ಭಾಗದಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಮುಚ್ಚಲಾಗುವುದು. ಇದರಿಂದ ಮುಂದಾಗುವ ಅನಾಹುತಕ್ಕೆ ನಗರಸಭೆ, ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಮುಖರಾದ ಕೃಷ್ಣಾ ನಾಯ್ಕ, ಶ್ರೀಧರ ನಾಯ್ಕ, ವೆಂಕಟೇಶ ನಾಯ್ಕ, ಗಣಪತಿ ನಾಯ್ಕ, ಈಶ್ವರ ನಾಯ್ಕ, ಪಾಂಡುರಂಗ ನಾಯ್ಕ, ಆರ್ ಜಿ ನಾಯ್ಕ, ಪ್ರಕಾಶ ನಾಯ್ಕ, ಮನಮೋಹನ ನಾಯ್ಕ ಮುಂತಾದವರಿದ್ದರು.