ಸಾರಾಂಶ
ಕೊಳ್ಳೇಗಾಲದಲ್ಲಿನ 23ನೇ ವಾರ್ಡ್ ನಿವಾಸಿಯೊಬ್ಬರು ಸ್ಥಳೀಯ ನಗರಸಭೆ ಸದಸ್ಯರ ಸಮ್ಮುಖದಲ್ಲಿ ನಲ್ಲಿಯಲ್ಲಿ ಪೂರೈಕೆಯಾದ ಕಲುಷಿತ ನೀರನ್ನು ಬಾಟಲ್ ನಲ್ಲಿ ಪ್ರದರ್ಶಿಸುತ್ತಿರುವುದು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆ ವ್ಯಾಪ್ತಿಯ 23ನೇ ವಾರ್ಡ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಸೋಮವಾರ ಬೆಳಗ್ಗೆ ಸಂಪತ್ ಕುಮಾರ್ ಎಂಬವರ ಮನೆಯ ನಲ್ಲಿಯಲ್ಲಿಯೂ ಸಹಾ ಕಲುಷಿತ ನೀರು ಅರ್ಧಗಂಟೆಗಳಿಗೂ ಹೆಚ್ಚು ಕಾಲ ಪೂರೈಕೆಯಾಗಿದ್ದು ಇದನ್ನು ಸ್ಥಳೀಯ ನಿವಾಸಿಗಳೇ ವೀಕ್ಷಿಸಿ ಬಾಟಲ್‌ನಲ್ಲಿ ಸಂಗ್ರಹಿಸಿದ್ದಾರೆ. ಸಂಪತ್ ಅವರು ಖುದ್ದು ನಗರಸಭೆ ಮುಂದೆ ಆಗಮಿಸಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು ನೀರಿನ ಬಾಟಲ್ ನಲ್ಲಿನ ನೀರು ಪ್ರದರ್ಶಿಸಿ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಮ್ಮ ವಾರ್ಡ್‌ನ ಕೆಲವು ನಲ್ಲಿಗಳಲ್ಲಿ ಸುಮಾರು ಅರ್ಧಗಂಟೆ, 1 ಗಂಟೆಗಳಿಗೂ ಹೆಚ್ಚು ಕಾಲ ಕೆಂಪು ಬಣ್ಣ ಮಿಶ್ರಿತ ನೀರು ಪೂರೈಕೆಯಾಗುತ್ತಿದ್ದು ಈ ನೀರು ಕಲುಷಿತವಾಗಿದ್ದು, ದುರ್ವಾಸನೆ ಬೀರುವಂತಿದೆ. ಇದನ್ನು ಸರಿಪಡಿಸಬೇಕು ಎಂದು ಸಂಪತ್ ಕುಮಾರ್ ಮನವಿ ಮಾಡಿದ್ದಾರೆ. ಸಂಪತ್ ಕುಮಾರ್ ಸ್ಥಳೀಯ ವಾರ್ಡ್ ಸದಸ್ಯ ಜಯಮರಿ ಸಮ್ಮುಖದಲ್ಲಿ ಕಲುಷಿತ ನೀರು ಪ್ರದರ್ಶಿಸುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಎಚ್ಚೆತ್ತಿದ್ದು ನಗರಸಭೆಯ ನೀರು ಪೂರೈಕೆ ಮತ್ತು 24ಗಂಟೆ ಕುಡಿಯುವ ನೀರು ಪೂರೈಕೆಯನ್ನು ಅಧಿಕಾರಿಗಳು ಪರಿಶೀಲಿಸುವಂತೆ ಆಯುಕ್ತರು ಸೂಚಿಸಿದ್ದಾರೆ.24ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆಯಡಿ 23ನೇ ವಾರ್ಡ್‌ನಲ್ಲಿ ಸಾಕಷ್ಟು ಅದ್ವಾನಗಳಾಗಿವೆ, ಈ ಕುರಿತು ನಗರಸಭೆಯಲ್ಲಿ ಅದ್ವಾನಗಳ ಕುರಿತಂತೆ ಸಾಕ್ಷಿ ಸಮೇತ ಸ್ಥಳೀಯ ಶಾಸಕರು, ಆಯುಕ್ತರು, ಅಧ್ಯಕ್ಷರಾದಿಯಾಗಿ ಎಲ್ಲರಿಗೂ ಪೋಟೊ ಸಮೇತ ಲಿಖಿತ ದೂರು ಸಲ್ಲಿಸಿದ್ದೇನೆ. ಈ ಕುರಿತು ನಗರಸಭಾಧಿಕಾರಿಗಳು ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.ಅದು ನಲ್ಲಿ ನೀರೆ? ಎಂಬುದನ್ನು ಪರಿಶೀಲಿಸಲಾಗುತ್ತೆ: 23ನೇ ವಾರ್ಡ್‌ನಲ್ಲಿ ಪೂರೈಕೆಯಾದ ನೀರು ನಿಜಕ್ಕೂ ನಲ್ಲಿಯಿಂದ ಬಂದ ನೀರೆ, ಅಥವಾ ಬೇರೆಯದ್ದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸ್ಥಳೀಯ ನಗರಸಭೆ ಸದಸ್ಯೆ ಜಯಮರಿ ಅವರು ಕಲುಷಿತ ನೀರು ಪೂರೈಕೆ ಬಗ್ಗೆ ಆರೋಪಿಸಿದ್ದು, ಈ ಸಂಬಂಧ ಪರಿಶೀಲನೆಗೆ ಸಂಬಂಧಪಟ್ಟವರನ್ನು ಕಳುಹಿಸಲಾಗಿದೆ. ಪರಿಶೀಲನೆ ಬಳಿಕ ಅದು ನಲ್ಲಿಯಿಂದ ಬಂದ ನೀರೆ, ಅಥವಾ ಬೇರೆಯ ಕಡೆಯ ನೀರೆ ಎಂಬುದನ್ನು ಸ್ಪಷ್ಟಪಡಿಸುವುದಾಗಿ ನಗರಸಭೆ ಆಯುಕ್ತ ರಮೇಶ್ ತಿಳಿಸಿದ್ದಾರೆ.