ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಕಳೆದ ಹಲವು ದಿನಗಳಿಂದ ನಲ್ಲಿಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ನೀರು ಕುಡಿದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ ಎಂದು ನಾಗರಿಕರು ಭಯಗೊಂಡಿದ್ದಾರೆ.ಪಟ್ಟಣದ ದೇಸಾರ ವಾಡೆ, ಬಯ್ಯಾರ ಓಣಿ, ೧ನೇ ವಾರ್ಡ್‌ನಲ್ಲಿ ಕಂದು ಬಣ್ಣದ, ದುರ್ನಾತ ಬೀರುತ್ತಿರುವ ನೀರು ಪೂರೈಕೆಯಾಗುತ್ತಿದ್ದು, ಜನರು ಪಪಂನವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣ ಪಂಚಾಯತಿ ಸರಬರಾಜು ಮಾಡುವ ಕಲುಷಿತ ನೀರಿನಿಂದ ಜನರಲ್ಲಿ ಆರೋಗ್ಯ ಕೆಡುವ ಭೀತಿ ಹೆಚ್ಚಳವಾಗಿದೆ. ಪ್ರಾಯೋಗಿಕವಾಗಿ ಆರಂಭಿಸಿರುವ ವಾರ್ಡ್‌ಗಳ ನಲ್ಲಿಗಳಲ್ಲಿ ದುರ್ನಾತ ಮತ್ತು ಕಾಫಿ ಬಣ್ಣದ ನೀರು ಪೂರೈಕೆ ಆಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಜನರ ಆರೋಪವಾಗಿದೆ. ಈ ನೀರು ಕುಡಿಯುವುದು ದೂರದ ಮಾತು ಮನೆಗೆಲಸಕ್ಕೆ ಬಳಸಲೂ ಯೋಗ್ಯವಾಗಿಲ್ಲ. ಬಟ್ಟೆ ತೊಳೆಯಲು ಅಥವಾ ಸ್ನಾನ ಮಾಡಲು ಸಹ ಈ ನೀರು ಬಳಸಲು ಜನರು ಹಿಂದೇಟು ಹಾಕುವಂತಾಗಿದೆ.ಸರ್ಕಾರ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸರ್ಕಾರ ಸಾಕಷ್ಟು ಅನುದಾನ ನೀಡಿದರೂ, ಸಂಬಂಧಿಸಿ ಅಧಿಕಾರಿಗಳು ಕುಡಿಯುವ ನೀರು ಶುದ್ಧೀಕರಿಸದೇ ಜನರಿಗೆ ಹಾಗೆ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಈಗ ಕೇಳಿಬರುತ್ತಿದೆ. ಶುದ್ಧೀಕರಿಸಿದ ಬಳಿಕವೇ ನೀರು ಸರಬರಾಜು ಮಾಡಬೇಕು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ೧ನೇ ವಾರ್ಡ್ ಜನರು ಒತ್ತಾಯಿಸಿದ್ದಾರೆ.
ಕಲುಷಿತಗೊಂಡ ಕೆರೆಯ ನೀರು:ಪಟ್ಟಣಕ್ಕೆ ಕೆಲವು ವಾರ್ಡಗಳಿಗೆ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ದೇಸಾರ ವಾಡೆ, ಬಯ್ಯಾರ ಓಣಿ, ೧ನೇ ವಾರ್ಡಿಗೆ ವರ್ಚಗಲ್ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ಆದರೆ, ಮುಂಗಾರಿನಲ್ಲಿ ಸರಿಯಾದ ಮಳೆಯಾಗದ ಕಾರಣ ಕೆರೆಗೆ ಹೊಸ ನೀರು ಹರಿದು ಬಂದಿಲ್ಲ. ಈಗಿರುವ ನೀರು ತಳಮಟ್ಟಕ್ಕೆ ತಲುಪಿದ್ದರಿಂದ ಕಲುಷಿತಗೊಂಡಿದೆ. ನೀರು ಶುದ್ಧೀಕರಣ ಘಟಕ ಇದ್ದರೂ ಅದು ದುರಸ್ತಿಯಲ್ಲಿದೆ. ಅದನ್ನು ದುರಸ್ತಿ ಮಾಡುವ ಗೋಜಿಗೂ ಪಪಂನವರು ತಲೆಕೆಡಿಸಿಕೊಂಡಿಲ್ಲ. ಪಟ್ಟಣದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ, ಇವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾಗರಿಕರು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ದುಡ್ಡು ಕೊಟ್ಟು ನೀರು ಖರೀದಿಸುವ ಸ್ಥಿತಿ ಬಂದಿದೆ. ಪಟ್ಟಣ ಪಂಚಾಯತಿ ಈಗಲೇ ಎಚ್ಚೆತ್ತು ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳದಿದ್ದರೆ ಮುಂದೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.------
ಕೋಟ್...ಪಟ್ಟಣ ಪಂಚಾಯತಿಯವರು ವರ್ಚಗಲ್ ಕೆರೆಯಿಂದ ಶುದ್ಧೀಕರಿಸದೇ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ನೀರು ಕಂದು ಬಣಕ್ಕೆ ತಿರುಗಿದ್ದು, ದುರ್ನಾತ ಬೀರುತ್ತಿದೆ. 5-6 ತಿಂಗಳಿನಿಂದ ಕಲುಷಿತ ನೀರು ಸರಬರಾಜು ಆಗುತ್ತಿರುವ ಕುರಿತು ಪಪಂ ಅಧಿಕಾರಿಗೆ ಹಲವು ಬಾರಿ ತಿಳಿಸಿದ್ದರೂ ಗಮನಹರಿಸುತ್ತಿಲ್ಲ. ಒಂದು ವೇಳೆ ಈ ನೀರನ್ನು ಕುಡಿದು ಯಾವುದೇ ಅನಾಹುತವಾದರೆ ಅದಕ್ಕೆ ಪಪಂ, ತಾಪಂ ಅಧಿಕಾರಿಗಳೇ ನೇರ ಹೊಣೆಗಾರರು. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು.
-೧ನೇ ಮತ್ತು ೨ನೇ ವಾರ್ಡ್ ನಿವಾಸಿಗಳು, ಲೋಕಾಪುರ----------
ವರ್ಚಗಲ್ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಮೇಲಧಿಕಾರಿಗಳಿಗೆ ಜೊತೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಲ್ಲ.- ಸುನೀಲ ಗಾವಡೆ ಪಪಂ ಮುಖ್ಯಾಧಿಕಾರಿಗಳು, ಲೋಕಾಪುರ.
-----------------