ಕವಿತಾಳ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ, ಆತಂಕ

| Published : Jun 07 2024, 12:15 AM IST

ಸಾರಾಂಶ

ಕೆರೆಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ಕೊರತೆ. ಬುಧವಾರ ಪೂರೈಸಿದ ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಹಸಿರು ಬಣ್ಣದ ಹೊಂಡು ಮಿಶ್ರಿತ ನೀರಿನಲ್ಲಿ ಕಸ ಕಡ್ಡಿ, ಹುಳು ಸೇರಿದಂತೆ ಗಲೀಜು ಬರುತ್ತಿದೆ. ಕುಡಿಯಲು ಇರಲಿ ಬಳಕೆಗೂ ಸಾಧ್ಯವಿಲ್ಲ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಎಲ್ಲಿಂದ ತರುವುದು ಎಂದು ಪಟ್ಟಣದ ಜನತೆ ಕೇಳುವಂತಾಗಿದೆ.

ಕನ್ನಡಪ್ರಭ ವಾರ್ತೆ ಕವಿತಾಳ

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವುದು ನೀರಿನ ಸಂರಕ್ಷಣೆ ಸ್ವಚ್ಛತೆ ಸೇರಿ ಪರಿಸರ ಸಂರಕ್ಷಣೆ ಕುರಿತ ಭಾಷಣೆಗಳನ್ನಾಡುತ್ತಾರೆ. ಈ ಸಮಯದಲ್ಲಿಯೇ ಪಟ್ಟಣಕ್ಕೆ ಪೂರೈಸುವ ಕುಡಿಯುವ ನೀರು ಕಲುಷಿತಗೊಂಡಿದ್ದು ರೋಗ ಭೀತಿಯಲ್ಲಿ ಸಾರ್ವಜನಿಕರು ಆತಂಕಪಡುವಂತಾಗಿದೆ.

ತುಂಗಭದ್ರ ಎಡದಂಡೆ ಕಾಲುವೆ ನೀರು ಪೂರೈಸಲು 73 ಕ್ಯಾಂಪ್ ಹತ್ತಿರ ನಿರ್ಮಿಸಿದ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿರುವುದು ಈಗಾಗಲೇ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ತಳಮಟ್ಟದ ಕಲುಷಿತ ನೀರು ಪೂರೈಕೆಯಿಂದ ಜನರಲ್ಲಿ ಆತಂಕ ಹೆಚ್ಚಿದೆ. ಬುಧವಾರ ಪೂರೈಸಿದ ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಹಸಿರು ಬಣ್ಣದ ಹೊಂಡು ಮಿಶ್ರಿತ ನೀರಿನಲ್ಲಿ ಕಸ ಕಡ್ಡಿ, ಹುಳು ಸೇರಿದಂತೆ ಗಲೀಜು ಬರುತ್ತಿದೆ. ಕುಡಿಯಲು ಇರಲಿ ಬಳಕೆಗೂ ಸಾಧ್ಯವಿಲ್ಲ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಎಲ್ಲಿಂದ ತರುವುದು ಎಂದು ಪಟ್ಟಣದ ಜನತೆ ಕೇಳುವಂತಾಗಿದೆ.

ಕೆರೆಗೆ ನೀರು ತುಂಬಿಸಲು ಪ.ಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮ ನೀರಿನ ಕೊರತೆ ಎದುರಾಗಿದೆ. ಈಗಾಗಲೇ ಕಳೆದ ಎರಡು ತಿಂಗಳಿಂದ ಐದು ದಿನಗಳಿಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ನಡುವೆ ಕಲುಷಿತ ನೀರು ಬಿಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಲುಷಿತ ನೀರು ಎಂದು ಸ್ಥಳೀಯ ಆಡಳಿತಕ್ಕೆ ಮಾಹಿತಿ ಇದ್ದು ಅದಕ್ಕಾಗಿ ಬೆಳಗ್ಗೆ ತ್ಯಾಜ್ಯ ಸಾಗಿಸುವ ವಾಹನಗಳಲ್ಲಿ ಕಾಯಿಸಿ ಆರಿಸಿ ನೀರು ಕುಡಿಯುವಂತೆ ಮತ್ತು ವಾಂತಿ ಬೇಧಿ ಕಾಣಿಸಿಕೊಂಡಲ್ಲಿ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಮಾಹಿತಿ ನೀಡಲಾಗುತ್ತಿದೆ. ಆದರೆ ಶುದ್ಧ ನೀರು ಪೂರೈಕೆ ಬಗ್ಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಯೋಚಿಸದಿರುವುದು ಸಾರ್ವಜನಿಕರ ಆಕ್ರಶಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಮುಖ್ಯಾಧಿಕಾರಿ ಎಂಜಿನಿಯರ್‌ಗೆ ಮಾಹಿತಿ ಕೇಳುವಂತೆ ಹೇಳುತ್ತಾರೆ ಎಂಜಿನಿಯರ್ ಗಮನ ಹರಿಸುವುದಾಗಿ ಹೇಳುತ್ತಾರೆ.

ಆಡಳಿತಾಧಿಕಾರಿ ಆಗಿರುವ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿಯವರು ಕೊಳವೆಬಾವಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು. ಆದರೆ ಕಳೆದ ಎರಡು ತಿಂಗಳ ಹಿಂದೆ ಕೆಟ್ಟ ಕೊಳವೆಬಾವಿ ದುರಸ್ತಿ ಮಾಡದಿರುವ ಅಧಿಕಾರಿಗಳ ಧೋರಣೆಗೆ ಬಗ್ಗೆ ಅಧಿಕಾರಿಗಳು ಮೌನವಹಿಸಿರುವುದು ಖಂಡನೀಯ ಎಂದು ಗಂಗಪ್ಪ ಪೂಜಾರಿ ಆಗ್ರಹಿಸಿದ್ದಾರೆ.06ಕೆಪಿಕೆವಿಟಿ01ಮತ್ತು02ಕವಿತಾಳ ಪಟ್ಟಣಕ್ಕೆ ಪೂರೈಕೆ ಆಗುತ್ತಿರುವ ಕಲುಷಿತ ಕುಡಿಯುವ ನೀರು.