ಪಾರದರ್ಶಕ ಬೆಳೆ ವಿಮೆ ಪರಿಹಾರಕ್ಕೆ ಚಿಂತನೆ

| Published : Sep 13 2024, 01:42 AM IST

ಪಾರದರ್ಶಕ ಬೆಳೆ ವಿಮೆ ಪರಿಹಾರಕ್ಕೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಲಾಭದ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ವಿಮಾ ಕಂಪನಿಗಳು ರೈತರ ಹಿತದೃಷ್ಟಿ ಕಾಯದೇ ಕೇವಲ ಲಾಭದತ್ತ ಕಾರ್ಯ ನಿರ್ವಹಿಸುತ್ತವೆ. ಈ ಹಿನ್ನಲೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ವಿಮಾ ಕಂಪನಿಗಳಲ್ಲಿ ಬದಲಾವಣೆ ಬರಬೇಕಿದೆ.

ಧಾರವಾಡ:

ಪ್ರಸಕ್ತ 2024ನೇ ಸಾಲಿನ ಬೆಳೆ ವಿಮೆ ಕುರಿತಂತೆ ಜಿಲ್ಲೆಯ ವಿವಿಧ ಭಾಗಗಳ ರೈತ ಮುಖಂಡರ ಜತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗುರುವಾರ ಸಭೆ ನಡೆಸಿದರು.ಬೆಳೆ ಕಟಾವು, ಬೆಳೆ ಹಾನಿ, ವಿಮಾ ಕಂಪನಿಗಳ ಅವೈಜ್ಞಾನಿಕ ಪದ್ಧತಿ, ಪರಿಹಾರ ವ್ಯತ್ಯಾಸ ಕುರಿತಂತೆ ಹಲವು ರೈತ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಚಿವರು ಮಾತನಾಡಿ, ಬೆಳೆ ಕಟಾವು ಮಾದರಿಗಳನ್ನು ಎರಡ್ಮೂರು ಪಟ್ಟು ಹೆಚ್ಚಿಸುವಲ್ಲಿ ಕ್ರಮಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದೆಂದರು.

ಲಾಭದ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ವಿಮಾ ಕಂಪನಿಗಳು ರೈತರ ಹಿತದೃಷ್ಟಿ ಕಾಯದೇ ಕೇವಲ ಲಾಭದತ್ತ ಕಾರ್ಯ ನಿರ್ವಹಿಸುತ್ತವೆ. ಈ ಹಿನ್ನಲೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ವಿಮಾ ಕಂಪನಿಗಳಲ್ಲಿ ಬದಲಾವಣೆ ಬರಬೇಕಿದೆ. ರೈತರು ಸಹ ಇದಕ್ಕೆ ಪೂರಕವಾಗಿ ಒತ್ತಾಯ ಹಾಕಬೇಕೆಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ವಿಮಾ ಕಂಪನಿ ಆರಂಭಿಸಿ ಪಾರದರ್ಶಕ ಸಹಕಾರಿ ಸೊಸೈಟಿ ಮಾದರಿಯಲ್ಲಿ ವಿಮಾ ಸೊಸೈಟಿ ಆರಂಭಿಸಿ ಪರಿಹಾರ ಅನುಷ್ಠಾನಗೊಳಿಸವಲ್ಲಿ ಚರ್ಚೆ ನಡೆಯಬೇಕಿದೆ ಎಂದರು.

ಬೆಳೆಹಾನಿಯಾದಲ್ಲಿ ಸರ್ಕಾರಿ ವಿಮಾ ಕಂಪನಿಗಳಿಂದಲೇ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದೆರೆಡು ದಿನಗಳಲ್ಲಿ ಅನುಭವಿ ಪರಿಣಿತ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದೆಂದು ಸಚಿವರು ತಿಳಿಸಿದರು.

ಕೆಲ ಪ್ರದೇಶಗಳಲ್ಲಿ ಒಂದೇ ತೆರನಾದ ಬೆಳೆ ಬೆಳೆಯುವಂತೆ ಹಾಗೂ ವಿಮೆ ಮಾಡಿಸುವಂತೆ ಕೆಲ ವ್ಯಕ್ತಿಗಳು ವಿಮಾ ಕಂಪನಿಗಳ ಜತೆಗೂಡಿ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ರೈತರು ಸಚಿವರ ಗಮನಕ್ಕೆ ತಂದರು. ಇಂಥವರ ಬಗ್ಗೆ ತೀವ್ರ ನಿಗಾವಹಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಸಭೆಯಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಇದ್ದರು. ಸಭೆಯಲ್ಲಿ ಜಿಲ್ಲೆಯ ಹಲವಾರು ರೈತ ಮುಖಂಡರು ಅಭಿಪ್ರಾಯ ಹಂಚಿಕೊಂಡರು.