ಸ್ವಾಭಿಮಾನಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಕೆ.ರಘುಪತಿ ಭಟ್

| Published : May 24 2024, 12:50 AM IST / Updated: May 24 2024, 12:51 AM IST

ಸಾರಾಂಶ

ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರದೇ ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿದ್ದೇನೆ. ನನ್ನ ಗೆಲುವು ಶತಃಸಿದ್ಧ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಭೌಗೋಳಿಕವಾಗಿ ಬಿಜೆಪಿ ತೀರ್ಮಾನದಿಂದ ಕರಾವಳಿಗೆ ಅನ್ಯಾಯವಾಗಿದೆ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರದೇ ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿದ್ದೇನೆ. ನನ್ನ ಗೆಲುವು ಶತಃಸಿದ್ಧ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.

ಅಂತಿಮ ಕ್ಷಣದವರೆಗೆ ಟಿಕೆಟ್ ನೀಡುವ ಭರವಸೆ ನೀಡಿ, ಕೊನೆ ಗಳಿಗೆಯಲ್ಲಿ ನನ್ನನ್ನು ವಂಚಿಸಿದ ಕಾರಣ ಸ್ವಾಭಿಮಾನದ ಸಲುವಾಗಿ ಸ್ವತಂತ್ರವಾಗಿ ಸ್ಪರ್ಧಿಸುವ ತೀರ್ಮಾನಕ್ಕೆ ಬರುವುದು ಅನಿವಾರ್ಯವಾಗಿದೆ. ನಾನು ಚುನಾವಣೆಗೆ ಸ್ಪರ್ಧೆ ಮಾಡಿರುವುದು ಬೇರೆಯವರನ್ನು ಸೋಲಿಸುವ ಉದ್ದೇಶದಿಂದಲ್ಲಾ ಎಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಚುನಾವಣೆ ಸರ್ಕಾರ ರಚನೆಗಾಗಿ ನಡೆಯೋ ಚುನಾವಣೆಯೂ ಅಲ್ಲಾ. ಪಕ್ಷದ ಚಿಹ್ನೆಯೂ ಬಳಕೆಯಾಗುತ್ತಿಲ್ಲಾ. ಹೀಗಾಗಿ ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತನೇ ಆಗಿದ್ದು ಕಮಲದ ವಿರುದ್ಧ ಸ್ಪರ್ಧೆ ಮಾಡುತ್ತಿಲ್ಲಾ. ಹಿರಿಯರಾದ ಗಿರೀಶ್ ಪಟೇಲ್, ದತ್ತಾತ್ರಿ ಮತ್ತು ಅತ್ಯಂತ ಆಸಕ್ತಿ ಹೊಂದಿದ್ದ ಮತ್ತೋರ್ವ ಹಿರಿಯ ಕಾರ್ಯಕರ್ತ ಬೇಗುವಳ್ಳಿ ಸತೀಶ್‍ರಿಗೆ ಅವಕಾಶ ಸಿಗುತ್ತಿದ್ದರೆ ನನ್ನ ವಿರೋಧವಿರಲಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಡಾ.ಧನಂಜಯ ಸರ್ಜಿ ಒಂದೂವರೆ ವರ್ಷದ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಯಾದವರು. ಮತ್ತು ಅವರಿಂದ ಪಕ್ಷಕ್ಕೆ ಅಂತಹಾ ಯಾವ ಕೊಡುಗೆಯೂ ಸಂದಿಲ್ಲಾ. ಸಾಲದ್ದಕ್ಕೆ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಘ ಪರಿವಾರದ ನಿಲುವಿಗೆ ವಿರುದ್ಧವಾಗಿ ಪ್ರಗತಿಪರರು, ನಗರ ನಕ್ಸಲರೂ ಮತ್ತು ಕಮ್ಯೂನಿಷ್ಟರ್‌ ಜೊತೆ ಸೇರಿ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರರ ರಾಜೀನಾಮೆಗೂ ಆಗ್ರಹಿಸಿದ್ದರು ಎಂದೂ ಆರೋಪಿಸಿದರು.

ನಾನೊಬ್ಬ ಪಕ್ಷದ ನಿಷ್ಠಾವಂತ ಹಿರಿಯ ಕಾರ್ಯಕರ್ತ. ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿ 2-3 ದಿನಗಳವರೆಗೂ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಸರ್ಜಿಯವರೂ ಸೇರಿ ಪಕ್ಷದ ಯಾರೂ ನನ್ನನ್ನು ಸಂಪರ್ಕ ಕೂಡಾ ಮಾಡಿಲ್ಲಾ. ಅಂತಿಮವಾಗಿ ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದ ಬೆಂಬಲದಿಂದ ಆನೆ ಬಲ ಬಂದಂತಾಗಿದೆ. ನನ್ನ ಗೆಲುವು ಖಚಿತ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಮದನ್, ಮೇಲಿನಕೊಪ್ಪ ಮಹೇಶ್,ಶೋಬಾನೆ ರಮೇಶ್,ಗಿರೀಶ್ ಹಾಗೂ ಎಂ. ಶಂಕರ್ ಇದ್ದರು.