ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂಟಿರುವ ಕೊಳೆ ಶುದ್ಧೀಕರಣದ ಜತೆಗೆ ಪರಿಷತ್ತಿನ ಸ್ವಾಯತ್ತತೆ ಹಾಗೂ ಘನತೆಯನ್ನು ಮರುಸ್ಥಾಪಿಸಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭಿಲಾಷೆ ಹೊಂದಿರುವುದಾಗಿ ಸಾಹಿತಿ, ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂಟಿರುವ ಕೊಳೆ ಶುದ್ಧೀಕರಣದ ಜತೆಗೆ ಪರಿಷತ್ತಿನ ಸ್ವಾಯತ್ತತೆ ಹಾಗೂ ಘನತೆಯನ್ನು ಮರುಸ್ಥಾಪಿಸಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭಿಲಾಷೆ ಹೊಂದಿರುವುದಾಗಿ ಸಾಹಿತಿ, ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ದಶಕದಲ್ಲಿ ಕಸಾಪದ ಆಡಳಿತ ಕುರಿತು ಹಲವು ಪ್ರಶ್ನೆಗಳು ಮೂಡಿವೆ. ದುರಾಡಳಿತ ಹಾಗೂ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟ ನಡೆಸಿದ್ದೇವೆ. `ಕಸಾಪ ಉಳಿಸಿ, ದುರಾಡಳಿತ ತಪ್ಪಿಸಿ'''''''' ಎಂಬ ಆಶಯದೊಂದಿಗೆ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದರು.ಕಸಾಪದಲ್ಲಿ ಬದಲಾವಣೆ ಅಗತ್ಯವಿದೆ. ಸಂಸ್ಥೆಯಲ್ಲಿ ಸ್ವಚ್ಛತೆ ಮತ್ತು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿ ಸುಸ್ಥಿತಿಗೆ ತರಬೇಕಿದೆ. ಬೈಲಾ ತಿದ್ದುಪಡಿ ಸೇರಿದಂತೆ ನಡೆದಿರುವ ಬೆಳವಣಿಗೆಗಳ ಕುರಿತು ಸಾಹಿತ್ಯಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಇಂತಹ ಬೆಳವಣಿಗೆಗಳು ಪರಿಷತ್ತಿನ ಇತಿಹಾಸಕ್ಕೆ ಕಳಂಕ ತರುವಂತಾಗಬಾರದು ಎಂದರು.
ಕನ್ನಡ ನಿಘಂಟು ಕಾರ್ಯಕ್ಕೆ ಚಾಲನೆ ನೀಡುವುದು, ಸ್ಥಗಿತಗೊಂಡಿರುವ `ಕನ್ನಡ ನುಡಿ'''''''' ಮುಖವಾಣಿಯನ್ನು ಪುನರಾರಂಭಿಸುವುದು, ಸಣ್ಣ ಕಥೆಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ರೂಪಿಸುವುದು ಹಾಗೂ ಯುವ ಸಮೂಹಕ್ಕೆ ಮಾರ್ಗದರ್ಶನ ನೀಡಲು ಶಿಬಿರ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶ ಹೊಂದಿದ್ದೇನೆ. ಕಸಾಪದಲ್ಲಿರುವ ಮೂರು ಸಭಾಂಗಣಗಳ ಬಾಡಿಗೆಯನ್ನು ಕಡಿಮೆ ಮಾಡಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಜ್ಞಾನ ಮತ್ತು ವಿದ್ವತ್ತು ಹೊಂದಿರುವ ಕವಿಗಳು, ಸಾಹಿತಿಗಳ ಪ್ರತಿಭೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಕನ್ನಡ ಭಾಷೆ, ಜಲ, ನೆಲ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರದ ಗಮನ ಸೆಳೆಯಲಾಗುವುದು. ತಿಂಗಳಿಗೊಮ್ಮೆ ಪುಸ್ತಕ ಸಂತೆ ಆಯೋಜಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು.ಕಳೆದ ಅವಧಿಯಲ್ಲಿ ಕಸಾಪದಲ್ಲಿ 7ರಿಂದ 8 ಕೋಟಿ ರು.ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ತಾವು ಮಾಡಿರುವ 17 ಆರೋಪಗಳ ಪೈಕಿ 16 ಆರೋಪಗಳು ಸಾಬೀತಾಗಿವೆ. ಉಳಿದ ಒಂದು ಆರೋಪ ವಿಚಾರಣೆ ಹಂತದಲ್ಲಿದ್ದು, ಅದೂ ಶೀಘ್ರ ಇತ್ಯರ್ಥವಾಗಲಿದೆ. ಈ ಹಿಂದೆ ಕೂಡ ಕಸಾಪ ಆಡಳಿತಕ್ಕೆ ಸಂಬಂಧಿಸಿದಂತೆ ಹಣಕಾಸು ದುರುಪಯೋಗ ಸೇರಿದಂತೆ ಹಲವು ಆರೋಪಗಳ ಕುರಿತು ತನಿಖೆ ನಡೆದಿದೆ ಎಂದು ತಿಳಿಸಿದರು.
ಕಸಾಪ ಮೂಲ ಆಶಯಕ್ಕೆ ಧಕ್ಕೆ: ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಕಸಾಪ ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಹಾಗೂ ಪ್ರಜಾಸತ್ತಾತ್ಮಕ ಧೋರಣೆಯೊಂದಿಗೆ ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಬೇಕೆಂಬ ಉದ್ದೇಶ ಹೊಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆ ಉಂಟಾಗಿದೆ. ಹಾವೇರಿ ಹಾಗೂ ಮಂಡ್ಯದಲ್ಲಿ ನಡೆದ ಸಮ್ಮೇಳನಗಳ ಆಯೋಜನೆ ಕುರಿತು ಕನ್ನಡಿಗರಲ್ಲಿ ಅಸಮಾಧಾನ ಮೂಡಿದೆ ಎಂದು ಹೇಳಿದ ಅವರು, ಕಸಾಪ ತನ್ನ ಮೂಲ ಆಶಯದಂತೆ ಎಲ್ಲ ಕನ್ನಡಿಗರ ಪ್ರಾತಿನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಸಂಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.ಪ್ರಮುಖರಾದ ಆರ್.ಜಿ. ಹಳ್ಳಿ ನಾಗರಾಜ, ಮಲ್ಲಿಕಾರ್ಜುನ ಕಲಮರಹಳ್ಳಿ , ಎಲ್. ಜೀವನ ಇತರರು ಉಪಸ್ಥಿತರಿದ್ದರು.