ಸಾರಾಂಶ
ಶಾಸಕ ಬಾದರ್ಲಿ ನಿವಾಸದ ಮುಂದೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನಾ ಧರಣಿ. ನೂರಾರು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಕನಕದಾಸ ವೃತ್ತ, ಕಿತ್ತೂರುರಾಣಿ ಚೆನ್ನಮ್ಮ ವೃತ್ತದ ಮೂಲಕ ಶಾಸಕರ ನಿವಾಸಕ್ಕೆ ತೆರಳಿ ಕುಳಿತು ಘೋಷಣೆ ಕೂಗಿ ಸರ್ಕಾರದ ನೀತಿ ವಿರುದ್ಧ ಆಕ್ರೋಶ.
ಕನ್ನಡಪ್ರಭ ವಾರ್ತೆ ಸಿಂಧನೂರು
ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಆರ್‌ಡಿಪಿಆರ್ ರೂಪಿಸುವ ಕಾರ್ಯಕ್ರಮಗಳು ಮತ್ತು 4-6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ನಿಲ್ಲಿಸಬೇಕು ಹಾಗೂ ಎಲ್‌ಕೆಜಿ ಮತ್ತು ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಮುಂದುವರಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ತಾಲೂಕು ಘಟಕ ಗುರುವಾರ ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿಯವರ ನಿವಾಸದ ಮುಂದೆ ಪ್ರತಿಭಟನಾ ಧರಣಿ ನಡೆಸಿತು.ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಉದ್ಯಾನವನದಲ್ಲಿ ಜಮಾಯಿಸಿದ್ದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಕನಕದಾಸ ವೃತ್ತ, ಕಿತ್ತೂರುರಾಣಿ ಚೆನ್ನಮ್ಮ ವೃತ್ತದ ಮೂಲಕ ಶಾಸಕರ ನಿವಾಸಕ್ಕೆ ತೆರಳಿ ಕುಳಿತು ಘೋಷಣೆ ಕೂಗಿ ಸರ್ಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ ಮಾತನಾಡಿ, 3 ರಿಂದ 6 ವರ್ಷದ ಮಕ್ಕಳ ದೇಹದ ಅಂಗಾಂಗ ಮತ್ತು ಮೆದುಳಿನ ಬೆಳವಣಿಗೆಗಾಗಿ ಪೌಷ್ಟಿಕ ಆಹಾರ, ಆರೋಗ್ಯದ ಸೌಲಭ್ಯ, ಅನೌಪಚಾರಿಕ ಶಿಕ್ಷಣ ನೀಡುವುದಕ್ಕಾಗಿಯೇ 1976 ರಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಶಿಕ್ಷಣ ಇಲಾಖೆ ಈಗ ಆರಂಭಿಸುವ ಎಲ್‌ಕೆಜಿ-ಯುಕೆಜಿಗೆ 4 ವರ್ಷ ಮೇಲ್ಪಟ್ಟ ಮಕ್ಕಳು ಸರ್ಕಾರಿ ಶಾಲೆಗೆ ಹೋದರೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಲ್ಲದೆ ಮುಚ್ಚಬೇಕಾಗುತ್ತದೆ. ಇದರಿಂದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉದ್ಯೋಗ ಕಳೆದುಕೊಳ್ಳ ಬೇಕಾಗುತ್ತದೆ ಎಂದು ದೂರಿದರು.ತಾಲೂಕು ಘಟಕದ ಅಧ್ಯಕ್ಷೆ ಗಿರಿಜಮ್ಮ,ಕಾರ್ಯದರ್ಶಿ ಆದಿಲಕ್ಷ್ಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರ ಅನುಪಸ್ಥಿತಿಯಲ್ಲಿ ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಡಿ.ಎಚ್.ಕಂಬಳಿ, ರಾಜ್ಯ ಸಮಿತಿ ಸದಸ್ಯ ತಿಪ್ಪಯ್ಯ ಶೆಟ್ಟಿ, ಖಜಾಂಜಿ ಲಕ್ಷ್ಮಿ ದಢೇಸುಗೂರು, ಸದಸ್ಯರಾದ ರತ್ನಮ್ಮ ದೇವರಗುಡಿ, ಸಾವಿತ್ರಿ, ನಾಗರತ್ನ, ಮೇರಿ, ತ್ರಿವೇಣಿ, ಯಮನಮ್ಮ, ಸುರೇಖಾ, ಶಾಂಭವಿ, ಅಮರಮ್ಮ ಸೇರಿದಂತೆ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.