ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಹಲವಾರು ವರ್ಷಗಳಿಂದ ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ನಿರಂತರ ಮೋಸ ನಡೆಯುತ್ತಿದೆ. ಈ ಮೋಸದ ಹಿಂದೆ ಬಹಳ ದೊಡ್ಡ ಹಗರಣವಿದ್ದು ಪ್ರತಿವರ್ಷ ಕರ್ನಾಟಕ ಒಂದರಲ್ಲಿ ರೈತರಿಂದ ಎರಡು ಸಾವಿರ ಕೋಟಿಯಷ್ಟು ಹಣ ದೋಚಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡ ಆರೋಪಿಸಿದರು.

ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ ಹಾಗೂ ಡಿಎಪಿ ಗೊಬ್ಬರವನ್ನು ಅವುಗಳ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಪ್ರತಿ ವರ್ಷ ಸಾವಿರಾರು ಕೋಟಿ ರು. ಹಣವನ್ನು ಮಾರಾಟಗಾರರು, ಅಧಿಕಾರಿಗಳು, ರಾಜಕಾರಣಿಗಳು ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ಯೂರಿಯಾ ರಸಗೊಬ್ಬರ ಗರಿಷ್ಠ ಮಾರಾಟ ಬೆಲೆ ಪ್ರತಿ ಚೀಲಕ್ಕೆ ೨೬೫ ರು. ಇದ್ದರೂ ರಾಜ್ಯದೆಲ್ಲೆಡೆ ೩೨೦ ರಿಂದ ೬೦೦ ರು. ವರೆಗೆ, ಬಿಎಪಿ ಗೊಬ್ಬರದ ಬೆಲೆ ಪ್ರತಿ ಚೀಲಕ್ಕೆ ೧೩೫೦ ರು. ಇದ್ದರೂ ಅದನ್ನು ೧,೪೫೦ ರಿಂದ ೨೧೦೦ ರು. ವರೆಗೆ ಮಾರಾಟ ಮಾಡಲಾಗುತ್ತಿದೆ. ಮೂಲದಲ್ಲಿ ಕ್ರಮ ಕೈಗೊಳ್ಳಬೇಕಿದ್ದ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತು ಅಕ್ರಮ ಮಾಡುತ್ತಿರುವ ಡೀಲರ್‌ಗಳಿಗೆ ಮತ್ತು ರಸಗೊಬ್ಬರ ಕಂಪನಿಗಳಿಗೆ ಬೆಂಬಲಿಸುತ್ತಾ ಬರುತ್ತಿದ್ದಾರೆ ಎಂದು ದೂರಿದರು.

ಇಂತಹ ಅಕ್ರಮಗಳನ್ನು ನಿಲ್ಲಿಸಲು ಕೆಆರ್‌ಎಸ್ ಪಕ್ಷ ಸಹಾಯ ಮಾಡಿ ಎಂದು ಆರಂಭಿಸಿದೆ. ರೈತರಿಂದ ಬರುವ ದೂರುಗಳನ್ನು ಆದರಿಸಿ ಅಧಿಕಾರಿಗಳಿಗೆ ಒತ್ತಡ ಹೇರುವ ಮೂಲಕ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕೃಷಿ ಇಲಾಖೆ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ನಿರಂತರವಾಗಿ ಪತ್ರ ಮುಖಿಯನ್ನು ಕ್ರಮವಹಿಸುವಂತೆ ಒತ್ತಾಯ ಮಾಡುತ್ತಿದ್ದು ಕೃಷಿ ಇಲಾಖೆ ಮುಖ್ಯಸ್ಥರು ಕೂಡ ಈ ಅಕ್ರಮ ತಡೆಯುವ ನಿಟ್ಟಿನಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿರುವ ಕಾರಣ ಈ ಬಗ್ಗೆ ಕ್ರಮ ಕೈಗೊಳ್ಳಲು ಒಂದು ವಾರದ ಗಡುವು ನೀಡಿ ಮೇಲಧಿಕಾರಿಗಳಿಗೆ ಪತ್ರ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.


ತಕ್ಷಣವೇ ಕೃಷಿ ಇಲಾಖೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಪೂರೈಕೆ ಮಾಡಬೇಕು. ರಸಗೊಬ್ಬರ ಅಂಗಡಿಗಳಲ್ಲಿ ಬೆಲೆ, ದಾಸ್ತಾನು ವಿವರ ಇತ್ಯಾದಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ರಸ ಗೊಬ್ಬರವನ್ನು ಗರಿಷ್ಠ ಬೆಲೆಗೆ ಸೀಮಿತವಾಗಿ ಮಾರಾಟ ಮಾಡಬೇಕು. ರಸಗೊಬ್ಬರ ಅಕ್ರಮಗಳ ಕುರಿತು ದೂರು ನೀಡಲು ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ಅಧಿಕಾರಿಯ ಮೊಬೈಲ್ ನಂಬರ್‌ನ್ನು ಪ್ರದರ್ಶನ ಫಲಕದಲ್ಲಿ ನಮೂದಿಸಬೇಕು. ರಸಗೊಬ್ಬರ ಕಂಪನಿಗಳು ಸಬ್ಸಿಡಿ ರಸಗೊಬ್ಬರದ ಜೊತೆಗೆ ಡೀಲರ್‌ಗಳಿಗೆ ಲಿಂಕ್ ಪ್ರಾಡಕ್ಟ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕು. ಲಿಂಕ್ ಪ್ರಾಡಕ್ಟ್‌ಗಳನ್ನು ಕೊಳ್ಳುವಂತೆ ರೈತರನ್ನು ಬಲವಂತ ಮಾಡಬಾರದು. ನಿಯಮ ಮೀರುವ ಡೀಲರ್‌ಗಳ ಲೈಸೆನ್ಸ್ ರದ್ದಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಅರುಣ್ ಕುಮಾರ, ಮಲ್ಲೇಶ, ಮಲ್ಲಯ್ಯ, ನಾಗರಾಜು, ಹರೀಶ ಇದ್ದರು.