ಮುಂದುವರಿದ ಸಿಎನ್‌ಸಿ ಪಾದಯಾತ್ರೆ: ಇಂದು ಪೊನ್ನಂಪೇಟೆಯಲ್ಲಿ ಸಭೆ
KannadaprabhaNewsNetwork | Published : Oct 11 2023, 12:45 AM IST
ಮುಂದುವರಿದ ಸಿಎನ್‌ಸಿ ಪಾದಯಾತ್ರೆ: ಇಂದು ಪೊನ್ನಂಪೇಟೆಯಲ್ಲಿ ಸಭೆ
ಸಾರಾಂಶ
ತೊಡನಾಡ್ (ಕುಮಟೂರ್-ಶ್ರೀಮಂಗಲ) ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು) ಅಜ್ಜಮಾಡ ನಾಡ್ ಮಂದ್- ಕುರ್ಚಿಯಲ್ಲಿ ಮೂರನೇ ಹಂತದ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವ ಸಮಗ್ರ ಕುಲಶಾಸ್ತ್ರ ಅಧ್ಯಯನ, ಕೊಡವ ‘ಸಂಸ್ಕಾರ ಗನ್’ ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವರ ‘ಧಾರ್ಮಿಕ ಸಂಸ್ಕಾರ’ವೆಂದು ರಕ್ಷಿಸುವುದು ಸೇರಿದಂತೆ 9 ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ತೊಡನಾಡ್ (ಕುಮಟೂರ್-ಶ್ರೀಮಂಗಲ) ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು) ಅಜ್ಜಮಾಡ ನಾಡ್ ಮಂದ್- ಕುರ್ಚಿಯಲ್ಲಿ ನಡೆದ ಮೂರನೇ ಹಂತದ ಪಾದಯಾತ್ರೆ ಮತ್ತು ಕೊಡವ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೀವನದಿ ಕಾವೇರಿಗೆ ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. ಕಾವೇರಿಯು ವೇದ ಕಾಲದ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ಸರ್ಕಾರವು ಪೂಜ್ಯ ಭಾವನೆಯಿಂದ ಗೌರವಿಸಬೇಕು. ಯಹೂದಿ ಜನರ ಮೌಂಟ್ ಮೊರೈಯಾ ದೇವನೆಲೆ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರ ಕೇಂದ್ರವಾಗಿ ತಲಕಾವೇರಿಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಲಾಗಿದೆ. ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಘಟಿಸಿದ ಅಮಾಯಕ ಕೊಡವರ ರಾಜಕೀಯ ಹತ್ಯೆಗಳ ನೆನಪಿನ ಸ್ಮಾರಕಗಳನ್ನು ಸ್ಥಾಪಿಸಬೇಕು. ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಾಟ್ ಪರಂಟ್ ನಲ್ಲಿ ಅಂತಾರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಮ್ಮ ಸಂವಿಧಾನದ 49 ವಿಧಿ ಅಡಿಯಲ್ಲಿ ಮತ್ತು 1964 ರ ವೆನಿಸ್ ಘೋಷಣೆ ಯಂತೆ ನಿರ್ಮಿಸಬೇಕು ಸೇರಿದಂತೆ 9 ಹಕ್ಕೊತ್ತಾಯಗಳನ್ನು ಮಂಡಿಸಿದರು. ಬುಧವಾರ ಬೆಳಗ್ಗೆ 10 ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), ಮಧ್ಯಾಹ್ನ 1.30ಕ್ಕೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) ಮತ್ತು ಸಂಜೆ 4.30ಕ್ಕೆ ಪೊನ್ನಂಪೇಟೆ ಪಟ್ಟಣದಲ್ಲಿ ಮೆರವಣಿಗೆ ಹಾಗೂ ಸಭೆ ನಡೆಯಲಿದೆ ಎಂದು ನಾಚಪ್ಪ ತಿಳಿಸಿದರು. ಬಾಚರಣಿಯಂಡ ಚಿಪ್ಪಣ್ಣ, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಕೊಟ್ರಂಗಡ ಉಷಾ ಮಾದಪ್ಪ, ಕಲ್ಲಂಗಡ ಬೋಪಯ್ಯ, ಅಜ್ಜಿಕುಟೀರ ಲೋಕೇಶ್, ಕೊಟ್ರಂಗಡ ಸನ್ನಿ, ಬೊಟ್ಟಂಗಡ ಸವಿ ಗಿರೀಶ್, ಬಾಚರಣಿಯಂಡ ಪ್ರಮೀಳಾ ಚಿಪ್ಪಣ್ಣ, ಕಲ್ಲಂಗಡ ತುಳಸಿ ಪೊನ್ನಣ್ಣ, ಮಾತ್ರಂಡ ಅನಿತಾ ಮಾದಪ್ಪ ಮತ್ತಿತರರು ಹಾಜರಿದ್ದರು.