ಕಾರವಾರ : ಮುಂದುವರಿದ ಭಾರಿ ಮಳೆ, ಪ್ರವಾಹ ಭೀತಿ

| Published : Jul 16 2024, 12:48 AM IST / Updated: Jul 16 2024, 07:37 AM IST

ಸಾರಾಂಶ

ಕಾರವಾರದ ಅರಗಾ, ತೋಡೂರು, ಚೆಂಡಿಯಾ, ಐಸ್ ಫ್ಯಾಕ್ಟರಿ ಚೆಂಡಿಯಾ ಮತ್ತಿತರ ಕಡೆಗಳಲ್ಲೂ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ಕಾರವಾರ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ಮನೆಗಳು ಜಲಾವೃತವಾಗಿವೆ. ಕಾಳಜಿ ಕೇಂದ್ರಕ್ಕೆ ಜನತೆಯನ್ನು ಸ್ಥಳಾಂತರಿಸಲಾಗುತ್ತಿದೆ. ನದಿ ತೀರದ ಪ್ರದೇಶದಲ್ಲಿ ಪ್ರವಾಹ ಭೀತಿ ಆವರಿಸಿದೆ.

ಕಾರವಾರದ ಅರಗಾ, ತೋಡೂರು, ಚೆಂಡಿಯಾ, ಐಸ್ ಫ್ಯಾಕ್ಟರಿ ಚೆಂಡಿಯಾ ಮತ್ತಿತರ ಕಡೆಗಳಲ್ಲೂ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಗುಡ್ಡ- ಬೆಟ್ಟಗಳಿಂದ ಬರುವ ಭಾರೀ ಪ್ರಮಾಣದ ನೀರು ಸಮುದ್ರಕ್ಕೆ ಸರಾಗವಾಗಿ ಹರಿದುಹೋಗದೆ ಈ ಪ್ರದೇಶ ಜಲಾವೃತವಾಗುತ್ತಿದೆ. ಕದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಕಾಳಿ ನದಿ ತೀರದುದ್ದಕ್ಕೂ ಪ್ರವಾಹದ ಆತಂಕ ಮನೆಮಾಡಿದೆ. ಹೊನ್ನಾವರ ಬೆಂಗಳೂರು ಹೆದ್ದಾರಿಯಲ್ಲಿ ಯಲಗುಪ್ಪ- ಖರ್ವಾ ಬಳಿ ಗುಡ್ಡ ಕುಸಿದು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಮಾರು ಎರಡು ಗಂಟೆ ಬಳಿಕ ಕಲ್ಲು ಮಣ್ಣು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಬಡಗಣಿ, ಬಾಸ್ಕೇರಿ, ಗುಂಡಬಾಳ ನದಿಗಳು ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿವೆ. ಕೆಲವೆಡೆ ಹೊಲಗದ್ದೆಗಳು ಜಲಾವೃತವಾಗಿವೆ.

ಕುಮಟಾದಲ್ಲಿ ಭಾರಿ ಮಳೆಯಿಂದ ತಗ್ಗು ಪ್ರದೇಶ ಜಲಾವೃತವಾಗುತ್ತಿವೆ. ಚಂಡಿಕಾ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿದೆ. ಅಘನಾಶಿನಿ ನದಿಯ ನೀರಿನಲ್ಲೂ ಹೆಚ್ಚಳ ಆಗಿದೆ. ಮನೆಗಳ ಸಮೀಪ ನೀರು ಬರುತ್ತಿದೆ. ನದಿ ತೀರದ ಜನತೆ ಪ್ರವಾಹ ಭೀತಿಯಲ್ಲಿದ್ದಾರೆ. ಮೂರೂರಿನಲ್ಲಿ ಅಂಗಡಿಕೇರಿ ಬಳಿ ಕಿರಣ ಮುಕ್ರಿ ಎಂಬವರ ಮನೆಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅಲ್ಲಿದ್ದ 2 ಕುಟುಂಬದ ನಾಲ್ವರನ್ನು ಸ್ಥಳೀಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಗೋಕರ್ಣದ ಗಂಜಿಗದ್ದೆ ಬಳಿ ರಸ್ತೆ ಜಲಾವೃತವಾಗಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಭಟ್ಕಳದಲ್ಲಿ ಭಾರಿ ಮಳೆಯಾಗುತ್ತಿದೆ. ತಗ್ಗು ಪ್ರದೇಶದ ಜನತೆಗೆ ಪ್ರವಾಹದ ಆತಂಕ ಉಂಟಾಗಿದೆ. ಅಂಕೋಲಾದಲ್ಲೂ ಭಾರಿ ಮಳೆ ಬೀಳುತ್ತಿದೆ. ಕೆಲವೆಡೆ ನೀರು ನುಗ್ಗಿದೆ. ಶಿರಸಿ, ಯಲ್ಲಾಪುರ, ಸಿದ್ಧಾಪುರ, ಜೋಯಿಡಾ, ಮುಂಡಗೋಡಗಳಲ್ಲೂ ಉತ್ತಮ ಮಳೆಯಾಗುತ್ತಿದೆ.