ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಮಳೆ ತಗ್ಗಿದ್ದರೂ ಅನಾಹುತ ಮುಂದುವರಿದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಬೃಹತ್ ಮರವೊಂದು ಉರುಳಿಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿರೇಕೆರೂರಿನಲ್ಲಿ ಸಂಭವಿಸಿದೆ. ವರದಾ ನದಿ ಪ್ರವಾಹದಿಂದ ತಾಲೂಕಿನ ಹೊಸರಿತ್ತಿಯ ಮಂತ್ರಾಲಯ ರಾಘವೇಂದ್ರ ಮೂಲ ಸಂಸ್ಥಾನ ಮಠ ಜಲಾವೃತಗೊಂಡಿದೆ. ನದಿ ತೀರದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ.
ಬೈಕ್ ಮೇಲೆ ಮರ ಬಿದ್ದು ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ಮಂಜುನಾಥ ಪುಟ್ಟಲಿಂಗಣ್ಣನವರ (35) ಹಾಗೂ ಯತ್ನಳ್ಳಿ ಗ್ರಾಮದ ಹನುಮಂತಪ್ಪ ನಾಮದೇವ (25) ಮೃತಪಟ್ಟಿದ್ದಾರೆ. ಇವರಿಬ್ಬರೂ ಹೆಸ್ಕಾಂನಲ್ಲಿ ಜಂಗಲ್ ಕಟಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ ಇಬ್ಬರೂ ಊಟ ಮುಗಿಸಿ ಹೆಸ್ಕಾಂ ಕಚೇರಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ರಸ್ತೆ ಪಕ್ಕದಲ್ಲಿದ್ದ ಬೇವಿನ ಮರದ ಬುಡವೇ ಕಿತ್ತು ಇವರ ಮೇಲೆ ಬಿದ್ದಿದೆ. ಮರದ ಮಧ್ಯೆ ಸಿಲುಕಿ ತೀವ್ರ ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಸೋಮವಾರ ಮಳೆ ಶಾಂತಗೊಂಡಿದೆ. ಆದರೆ, ಜಿಲ್ಲೆಯಲ್ಲಿ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಅದರಲ್ಲೂ ವರದಾ ನದಿ ನೀರಿನ ಮಟ್ಟ ಏರುತ್ತಲೇ ಇದೆ. ಇದರಿಂದ ತಾಲೂಕಿನ ಹೊಸರಿತ್ತಿಯಲ್ಲಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮೂಲ ಸಂಸ್ಥಾನ ಮಠ ಜಲಾವೃತಗೊಂಡಿದೆ.
ಮಠದ ಸುತ್ತ ವರದಾ ನದಿ ನೀರು ತುಂಬಿದ್ದು, ಒಳನುಗ್ಗುವ ಆತಂಕ ಎದುರಾಗಿದೆ. ರಾಯರ ಮಠದ ಉದ್ಯಾನ, ಸಭಾಭವನ, ಮೆಟ್ಟಿಲು, ಆವರಣವನ್ನು ವರದೆ ನೀರು ಸುತ್ತುವರಿದಿದೆ. ಗುರುಪೂರ್ಣಿಮೆ ಅಂಗವಾಗಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಪರದಾಡುವಂತಾಗಿದೆ.ಬೆಳೆ ಮುಳುಗಡೆ: ವರದಾ ನದಿ ಅಬ್ಬರಕ್ಕೆ ನೂರಾರು ಎಕರೆ ಜಮೀನು ಮುಳುಗಡೆಯಾಗಿದೆ. ನಾಗನೂರು, ಕೋಳೂರು, ಕೂಡಲ, ಹೊಸರಿತ್ತಿ, ಸಂಗೂರು, ವರ್ದಿ, ವರದಾಹಳ್ಳಿ, ಕುಣಿಮೆಳ್ಳಿಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಹತ್ತಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ನೀರಿನಲ್ಲಿ ಮುಳುಗಿ ಕೊಳೆಯತೊಡಗಿದೆ.
ಮುಳುಗಡೆಯಾಗಿದ್ದ ಸೇತುವೆ ಇನ್ನೂ ತೆರವಾಗದ್ದರಿಂದ ಜಿಲ್ಲೆಯ ಹತ್ತಕ್ಕೂ ಹೆಚ್ಚು ಕಡೆ ರಸ್ತೆ ಸಂಪರ್ಕ ಸಾಧ್ಯವಾಗಿಲ್ಲ. ತುಂಗಭದ್ರಾ ನದಿಯೂ ಉಕ್ಕೇರಿ ಹರಿಯುತ್ತಿದೆ. ಹಾನಗಲ್ಲ ತಾಲೂಕಿನಲ್ಲಿ ಧರ್ಮಾ ನದಿಯೂ ಅಬ್ಬರದಿಂದ ಹರಿಯುತ್ತಿದೆ. ಧರ್ಮಾ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಕಂಚಿನೆಗಳೂರು ಬಳಿ ಜಲಪಾತ ಸೃಷ್ಟಿಯಾಗಿದೆ.ಕಾಲುವೆಯಿಂದ ಬೋರ್ಗರೆಯುತ್ತಿರುವ ನೀರನ್ನು ನೋಡಲು ಅಕ್ಕಪಕ್ಕದ ಜನತೆ ಮುಗಿಬೀಳುತ್ತಿದ್ದಾರೆ. ಅದೇ ರೀತಿ ಹಿರೇಕೆರೂರು ತಾಲೂಕಿನ ಮದಗ ಮಾಸೂರು ಕೆರೆ ಕೂಡ ಕೋಡಿ ಬಿದ್ದಿದೆ.