ಸಾರಾಂಶ
ಭಟ್ಕಳ: ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ವ್ಯಾಪಕ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿದೆ. ಶುಕ್ರವಾರ ಮಳೆ ಸ್ವಲ್ಪ ವಿರಾಮ ಪಡೆದಿದ್ದರೂ ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಬೆಳಗಿನ ಜಾವದವರೆಗೂ ಮಳೆಯ ಅಬ್ಬರ ಹೆಚ್ಚಾಗಿತ್ತು. ಶುಕ್ರವಾರ ಬೆಳಗ್ಗೆಯವರೆಗೆ ತಾಲೂಕಿನಲ್ಲಿ 106 ಮಿಮೀ ಮಳೆಯಾಗಿದ್ದು, ಇಲ್ಲಿಯವರೆಗೆ ಒಟ್ಟೂ 3617.6 ಮಿಮೀ ಮಳೆ ಸುರಿದಿದೆ.
ಮಳೆಗೆ ಮನೆಗಳು ಹಾನಿಯಾಗಿದೆ. ಮಳೆಯ ಜತೆಗೆ ಗಾಳಿ ಅಬ್ಬರವೂ ಹೆಚ್ಚಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ಮಳೆ- ಗಾಳಿಗೆ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಾನ ಗ್ರಾಮದ ಮಂಜಪ್ಪ ಜಟ್ಟಾ ನಾಯ್ಕ, ಮಾಸ್ತಿ ಸೋಮಯ್ಯ ಗೊಂಡ ಅವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ಹಾನಿ ಪರಿಶೀಲಿಸಿ ತಹಸೀಲ್ದಾರರಿಗೆ ಮಾಹಿತಿ ನೀಡಿದ್ದಾರೆ. ಭಾರೀ ಮಳೆಗೆ ಹದ್ಲೂರು, ಹೇರೂರಿನಲ್ಲಿ ಹೊಳೆ ನೀರು ಅಡಕೆ ತೋಟಕ್ಕೆ ನುಗ್ಗಿದೆ.ಹೊಳೆ, ಹಳ್ಳಗಳು ತುಂಬಿ ತುಳುಕುತ್ತಿದೆ. ಶುಕ್ರವಾರ ಸಂಜೆಯಿಂದ ಮತ್ತೆ ಮಳೆ ಆರಂಭವಾಗಿತ್ತು. ಕಳೆದ ಹದಿನೈದು ದಿನಗಳಿಂದ ಸತತವಾಗಿ ಗಾಳಿಯೊಂದಿಗೆ ಮಳೆ ಬೀಳುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಭಾರೀ ಮಳೆಗೆ ಎಲ್ಲ ಕಡೆ ನೀರು ಹರಿಯುತ್ತಿದೆ. ತೋಟದಲ್ಲಿ ಅಡಕೆ ಮರಗಳು ತುಂಡುತುಂಡಾಗಿ ಬಿದ್ದಿರುವುದು ಕಂಡುಬಂದಿದೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿ, ಗ್ರಾಮಾಂತರ ಭಾಗದ ರಸ್ತೆಗಳು ಹೊಂಡಮಯವಾಗಿದ್ದು, ಸಂಚರಿಸಲು ಪರದಾಡುವಂತಾಗಿದೆ.ಮನೆಗೋಡೆ ಬಿರುಕು: ಬೀಳುವ ಆತಂಕ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಹಲಸಿನಕೊಪ್ಪದ ನಾಗರಾಜ ಅಣ್ಣಪ್ಪ ದೇವಡಿಗ ಎಂಬವರ ಮನೆಯ ಗೋಡೆ, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಬೀಳುವ ಆತಂಕ ಎದರಾಗಿದೆ.ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಕಾರ್ಯದರ್ಶಿ ಮೋಹನ, ಗ್ರಾಮ ಲೆಕ್ಕಾಧಿಕಾರಿ ಜ್ಯೋತಿ ಜೋಗತಿಹಳ್ಳಿ, ಗ್ರಾಪಂ ಸದಸ್ಯರಾದ ಖೈತಾನ್ ಡಿಸೋಜಾ, ಅಶೋಕ ಪೂಜಾರಿ ಮುಂತಾದವರು ಆ. ೨ರಂದು ಭೇಟಿ ನೀಡಿ ಪರಿಶೀಲಿಸಿದರು.