ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ
KannadaprabhaNewsNetwork | Published : Oct 31 2023, 01:16 AM IST
ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ
ಸಾರಾಂಶ
ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸೋಮವಾರವೂ ಕೂಡ ಮಧ್ಯಾಹ್ನದ ನಂತರ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ಹಾಗೂ ಕೊಪ್ಪ ತಾಲೂಕುಗಳಲ್ಲಿ ಮಳೆ ಬಂದಿದ್ದು, ಇನ್ನುಳಿದ ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಚಿಕ್ಕಮಗಳೂರಿನಲ್ಲಿ ಸಂಜೆ 8 ಗಂಟೆಯ ವೇಳೆಗೆ ಆರಂಭವಾದ ಮಳೆ, ಮುಂಗಾರಿನಂತೆ ನಿರಂತರವಾಗಿ ಸಾಧಾರಣವಾಗಿ ಸುರಿಯುತ್ತಲೇ ಇತ್ತು. ಇದರ ನಡುವೆ ಆಗಾಗ ಗುಡುಗಿನ ಸದ್ದು ಮುಂದುವರೆದಿತ್ತು. ತರೀಕೆರೆಯಲ್ಲಿ ಸಂಜೆಯ ನಂತರ ಸಾಧಾರಣ ಮಳೆಯಾಗಿದೆ. ಎನ್.ಆರ್. ಪುರ ತಾಲೂಕಿನಲ್ಲಿ ಸಂಜೆ 5.30 ಕ್ಕೆ ಆರಂಭವಾದ ಮಳೆ ರಾತ್ರಿ 8 ಗಂಟೆ ನಂತರವೂ ಮುಂದುವರೆದಿತ್ತು. ಗುಡುಗು ಮತ್ತು ಮಿಂಚಿನ ಆರ್ಭಟ ಜೋರಾಗಿತ್ತು. ಶೃಂಗೇರಿ ತಾಲೂಕಿನಾದ್ಯಂತ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ರಾತ್ರಿ ವರೆಗೆ ಮುಂದುವರೆದಿತ್ತು. ಕೊಪ್ಪ, ಮೂಡಿಗೆರೆಯಲ್ಲಿ ಸಾಧಾರಣವಾಗಿ ಮಳೆ ಬಂದಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿ ಮಳೆ ಮತ್ತು ಗುಡುಗಿನಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕಡೂರು ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿತ್ತು.