ಸಾರಾಂಶ
ತರೀಕೆರೆ, ಅಜ್ಜಂಪುರ ಹೊರತುಪಡಿಸಿ ಎಲ್ಲಾ ತಾಲೂಕುಗಳಲ್ಲೂ ಸಾಧಾರಣ ಮಳೆ
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಮಲೆನಾಡು ಸೇರಿದಂತೆ ಬಯಲು ಸೀಮೆಯಲ್ಲೂ ಶನಿವಾರ ಹಿಂಗಾರು ಮಳೆ ಮುಂದುವರಿದಿತ್ತು.
ತರೀಕೆರೆ, ಅಜ್ಜಂಪುರ ಹೊರತುಪಡಿಸಿ ಇನ್ನುಳಿದಂತೆ ಎಲ್ಲಾ ತಾಲೂಕುಗಳಲ್ಲೂ ಮಧ್ಯಾಹ್ನದ ನಂತರ ಸಾಧಾರಣ ಮಳೆ ಬಂದಿದೆ.ಕಡೂರು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಜೆ 4.30 ರ ವೇಳೆಗೆ ಆರಂಭವಾದ ಮಳೆ ಸುಮಾರು 10 ನಿಮಿಷಗಳ ನಂತರ ಬಿಡುವು ನೀಡಿತು. ಚಿಕ್ಕಮಗಳೂರು ನಗರದಲ್ಲಿ ಮಳೆ ಇರಲಿಲ್ಲ, ಗ್ರಾಮೀಣ ಭಾಗದಲ್ಲಿ ಮಳೆ ಬಂದಿತು. ಎನ್.ಆರ್. ಪುರ ಪಟ್ಟಣದಲ್ಲಿ ಸುಮಾರು 20 ನಿಮಿಷ ಮಳೆ ಬಂದು ನಂತರ ಬಿಡುವು ನೀಡಿತು. ಬಾಳೆಹೊನ್ನೂರು, ಕೊಪ್ಪ ತಾಲೂಕಿನ ಬಸರೀಕಟ್ಟೆ, ಜಯಪುರ, ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲೂ ಮಳೆಯಾಗಿದೆ.
ಹಾತೂರು: ಅಡಕೆ ತೋಟಕ್ಕೆ ಸಿಡಿಲು ಬಡಿದು ಹಾನಿನರಸಿಂಹರಾಜಪುರ: ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾತೂರು ಗ್ರಾಮದ ಹೊಸಗದ್ದೆಯ ಎಚ್.ಎಸ್.ಸತೀಶ್ ಎಂಬುವರ ಅಡಕೆ ತೋಟಕ್ಕೆ ಶನಿವಾರ ಸಂಜೆ ಸಿಡಿಲು ಬಡಿದು 25ಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಅಡಕೆ ಮರಗಳಿಗೆ ಹಾನಿಯಾಗಿದೆ. ಸಿಡಿಲಿನ ರಬಸಕ್ಕೆ ಅಡಕೆ ತೋಟದಲ್ಲಿದ್ದ ಕಾಡು ಮರದ ತೊಪ್ಪೆ ಕಿತ್ತು ಹೋಗಿದೆ. ಅಡಕೆ ಸಸಿಗಳು ಕೆಂಪಾಗಿದೆ. ಇದರಿಂದ ಸಾವಿರಾರು ರುಪಾಯಿ ನಷ್ಟ ಉಂಟಾಗಿದೆ ಎಂದು ಹೊಸಗದ್ದೆಯ ಸತೀಶ್ ತಿಳಿಸಿದ್ದಾರೆ.ಫೋಟೊ ಇದೆ: ಹೊಸಗದ್ದೆಯ ಎಚ್.ಎಸ್.ಸತೀಶ್ ಎಂಬುವರ ಅಡಕೆ ತೋಟಕ್ಕೆ ಶನಿವಾರ ಸಂಜೆ ಸಿಡಿಲು ಬಡಿದಿದೆ.
--ಶೃಂಗೇರಿ ತಾಲೂಕಿನಲ್ಲಿ ವರ್ಷಧಾರೆಶೃಂಗೇರಿ: ತಾಲೂಕಿನ ವಿವಿಧೆಡೆ ಶನಿವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಕೆಲ ಹೊತ್ತು ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಇಬ್ಬನಿ ಕವಿದ ವಾತಾವರಣವಿದ್ದು, ಮಧ್ಯಾಹ್ನದವರೆದೆ ಬಿಸಿಲ ವಾತಾವರಣವಿತ್ತು. ಮಧ್ಯಾಹ್ನ ದಟ್ಟ ಮೋಡಕವಿದು ಗಾಳಿ, ಗುಡುಗು ಸಹಿತ ಕೆಲ ಹೊತ್ತು ಮಳೆ ಸುರಿಯಿತು. ಶೃಂಗೇರಿ ಪಟ್ಟಣದಲ್ಲಿ ಜೋರಾದ ಗಾಳಿ ಸಹಿತ ಸಾಧಾರಣ ಮಳೆಯಾದರೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುಮಾರು ಅರ್ಥಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು.
--ಬಾಳೆಹೊನ್ನೂರು ಸುತ್ತಮುತ್ತ ವರುಣಾರ್ಭಟಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಶನಿವಾರ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಗುಡುಗು ಸಹಿತವಾಗಿ ಆರಂಭಗೊಂಡ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮವಾಗಿ ಸುರಿದಿದೆ. ಗುರುವಾರವೂ ಸಹ ಉತ್ತಮವಾಗಿ ಬಂದಿದ್ದ ಮಳೆ ಒಂದು ದಿನ ಬಿಟ್ಟು ಪುನಃ ಬಂದಿದ್ದು ವಾತಾವರಣವನ್ನು ತಂಪಾಗಿಸಿದೆ.ಸೀಗೋಡು, ಹೇರೂರು, ಇಟ್ಟಿಗೆ ಆದರ್ಶನಗರ, ಶಿವನಗರ, ಮಸೀದಿಕೆರೆ, ರಂಭಾಪುರಿ ಪೀಠ, ಮೆಣಸುಕೊಡಿಗೆ, ಕುಂಬತ್ತಿ, ತಲವಾನೆ, ಮೇಲ್ಪಾಲ್, ಅರಳೀಕೊಪ್ಪ, ಸರಗಳಲೆ, ಸೀಕೆ, ವಾಟುಕೊಡಿಗೆ, ಮುದುಗುಣಿ, ಅಕ್ಷರನಗರ ಮುಂತಾದ ಕಡೆಗಳಲ್ಲಿಯೂ ಉತ್ತಮವಾಗಿ ಹದವಾದ ಮಳೆ ಬಂದಿದೆ.
೧೧ಬಿಹೆಚ್‌ಆರ್ ೧:ಬಾಳೆಹೊನ್ನೂರು ಸಮೀಪದ ಮೆಣಸುಕೊಡಿಗೆ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಮಳೆ ಸುರಿದಾಗ ಕಂಡುಬಂದ ದೃಶ್ಯ.