ಸಾರಾಂಶ
- ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು। ಲಕ್ಯಾ ಹೋಬಳಿ ಹೊರತುಪಡಿಸಿ ಚಿಕ್ಕಮಗಳೂರು ತಾಲೂಕಿಗೂ ರಜೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆ ಮುಂದುವರಿದು ಎಲ್ಲೆಡೆ ಪ್ರವಾಹದ ಸ್ಥಿತಿ ಎದುರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜಮೀನು ಹಾಗೂ ತೋಟಗಳಿಗೆ ನೀರು ನುಗ್ಗಲಾರಂಭಿಸಿದೆ.
ಮಳೆಗೆ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್. ಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರ ಜತೆಗೆ ಲಕ್ಯಾ ಹೋಬಳಿ ಹೊರತು ಪಡಿಸಿ ಚಿಕ್ಕಮಗಳೂರು ತಾಲೂಕು ಹಾಗೂ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ ಹೋಬಳಿಗಳಿಗೂ ಅನ್ವಯವಾಗುವಂತೆ ಮಂಗಳವಾರ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಅದರಲ್ಲೂ ಮಲೆನಾಡು ಭಾಗದಲ್ಲಂತೂ ವಾಡಿಕೆಗಿಂತಲೂ ನಾಲ್ಕು ಪಟ್ಟು ಮಳೆ ಹೆಚ್ಚಾಗಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಶೃಂಗೇರಿ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ತುಂಗಾ ನದಿ ಪ್ರವಾಹದಿಂದ ಪಟ್ಟಣದ ರಸ್ತೆಗಳು ಜಲಾವೃತವಾಗಿವೆ. ಶೃಂಗೇರಿಯ ಕಪ್ಪೆ ಶಂಕರ ದೇಗುಲ, ಗುರುಗಳ ಸಂಧ್ಯಾವಂದನೆ ಮಂಟಪ ಮುಳುಗಡೆಯಾಗಿದೆ. ಗಾಂಧಿ ಮೈದಾನ ಸೇರಿದಂತೆ ದೇವಸ್ಥಾನದ ಪಾರ್ಕಿಂಗ್ ಜಾಗದ ಪ್ಯಾರಲಲ್ ರಸ್ತೆಗಳಲ್ಲೂ ನೀರು ತುಂಬಿಹೋಗಿದೆ.ಕೆಮ್ಮಣ್ಣುಗುಂಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೊಂಡೇಖಾನ್ ಹಳ್ಳದ ಮೇಲ್ಭಾಗದ ರಸ್ತೆಯಲ್ಲಿ ಗುಡ್ಡ ಕುಸಿತ ಆರಂಭವಾಗಿದೆ. ಇದರಿಂದ ಕೆಸರು ಮಣ್ಣು ರಸ್ತೆ ಮೇಲೆ ಬಂದು ನಿಂತಿದ್ದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ರಸ್ತೆ ಮೇಲೆ ಹರಿಯುತ್ತಿದ್ದ ಕೆಸರು ನೀರನ್ನು ಬೇರೆ ಕಡೆ ತಿರುಗಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಇದೇ ರೀತಿ ಮಳೆ ಮುಂದುವರಿದರೆ ದೊಡ್ಡಮಟ್ಟದಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ.
ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಕಳಸ, ಚಿಕ್ಕಮಗಳೂರು ತಾಲೂಕುಗಳಲ್ಲಿಯೂ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿ, ಹಳ್ಳ ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿವೆ. ಹೀಗಾಗಿ ಜನರು ಹಾಗೂ ಪ್ರವಾಸಿಗರು ನದಿ ಪಾತ್ರ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.---ಬಾಕ್ಸ್ --ಆ.17 ರಂದು ಬಂದಿರುವ ಮಳೆಯ ವಿವರತಾಲೂಕುವಾಡಿಕೆ ಮಳೆಸುರಿದ ಮಳೆ (ಮಿ.ಮೀ.ಗಳಲ್ಲಿ)
-ಚಿಕ್ಕಮಗಳೂರು3.932.9
--ಕಡೂರು1.57.5
--ಕೊಪ್ಪ28.9 121.7
--ಮೂಡಿಗೆರೆ16.6 59.4
--ಎನ್.ಆರ್.ಪುರ13.0 69.2
--ಶೃಂಗೇರಿ35.5 124.5
-ತರೀಕೆರೆ4.8 17.8
--ಅಜ್ಜಂಪುರ2.64.6
--ಕಳಸ25.6 60.6
--ಒಟ್ಟು 14.045.0
ವರುಣನ ಆರ್ಭಟ ಕಡಿಮೆಯಾಗಲೆಂದು ಮಳೆ ದೇವರಿಗೆ ಅಗಿಲು ಸೇವೆಚಿಕ್ಕಮಗಳೂರು: ಮಳೆಯ ದೇವರಂದೇ ಖ್ಯಾತಿ ಹೊಂದಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯ ಶೃಂಗೇಶ್ವರನಿಗೆ ಸೋಮವಾರದಿಂದ ಮೂರು ದಿನಗಳ ಕಾಲ ಅಗಿಲು ಸೇವೆ ಮಾಡಲಾಗುತ್ತಿದೆ.ಶೃಂಗೇರಿ ಜಗದ್ಗುರುಗಳು ಅಷ್ಟಗಂಧಗಳಲ್ಲಿ ಉಷ್ಣಗಂಧಗಳಲ್ಲಿ ಒಂದಾದ ಅಗಿಲನ್ನು ಕಳುಹಿಸಿದ್ದಾರೆ. ಶೃಂಗೇರಿ ಶ್ರೀಗಳು ಅಗಿಲು ಕಳುಹಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹಾಗಾಗಿ ಈ ಬಾರಿಯೂ ಶ್ರೀಗಳು ಅಗಿಲು ಕಳುಹಿಸಿಕೊಟ್ಟಿದ್ದಾರೆ. ಋಷ್ಯಶೃಂಗೇಶ್ವರನ ಪಾದದಡಿ ಹಾಗೆ ಇಟ್ಟು ಪೂಜೆ ಸಲ್ಲಿಸಲಾಗುವುದು. ಅಗಿಲು ಸೇವೆ ಜೊತೆ ಮೂರು ದಿನ ಶತರುದ್ರಾಭಿಷೇಕ ಪೂಜೆ ನಡೆಯಲಿದೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿ ಪಾತ್ರಗಳಲ್ಲಿರುವ ಪ್ರದೇಶಗಳು ಜಲಾವೃತವಾಗಿವೆ. ಶೃಂಗೇರಿ ಪಟ್ಟಣ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ಮಳೆ ದಿನೇ ದಿನೇ ಏರಿಕೆಯಾಗುತ್ತಿದ್ದು, ವರುಣನ ಆರ್ಭಟ ನಿಯಂತ್ರಣ ಕ್ಕಾಗಿ ಮಳೆ ದೇವರಿಗೆ ಮೂರು ದಿನ ಅಗಿಲು ಸೇವೆ ಮಾಡಲಾಗುತ್ತಿದೆ.ರಾಜ್ಯದಲ್ಲಿ ಮಳೆ ಕೈ ಕೊಟ್ಟರೆ ಅಥವಾ ಭಾರೀ ಮಳೆಯಾಗುತ್ತಿದ್ದರೆ ಋಷ್ಯ ಶೃಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ರಾಜ್ಯ ಸರ್ಕಾರ ಕೂಡ ಹಲವು ಸಂದರ್ಭಗಳಲ್ಲಿ ವಿಶೇಷ ಪೂಜೆ ಮಾಡಿಕೊಂಡು ಬಂದಿದೆ.ಮಳೆ ದೇವರಿಗೆ ಆಗಿಲು ಸೇವೆ ಮಾಡಿಸಲಾಗುತ್ತಿದ್ದು, ಮಳೆ ಕಡಿಮೆ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.
ಧರೆಗುಸಿತ ಸಂಚಾರ ಬಂದ್ತರೀಕೆರೆ: ಮಳೆಯ ಅಬ್ಬರಕ್ಕೆ ಕೆಮ್ಮಣ್ಣ ಗುಂಡಿ ಗಿರಿ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಧರೆಕುಸಿತವಾಗಿ ಸಂಚಾರ ಬಂದ್ ಆಗಿದೆ.ತಾಲೂಕಿನ ಕೆಮ್ಮಣ್ಣಗುಂಡಿ ಗಿರಿ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಬೆಳಗಿನ ಜಾವ ಕೆಮ್ಮಣ್ಣಗುಂಡಿ ಮತ್ತು ಕಲ್ಹತ್ತಗಿರಿ ನಡುವಿನ ಹೊಂಡಕನ ಹಳ್ಳಿ ಧರೆಕುಸಿತ ಉಂಟಾಗಿ ಭಾರಿ ಪ್ರಮಾಣದ ಕೊಲ್ಲು ಮತ್ತೆ ಮಣ್ಣು ರಸ್ತೆಗೆ ಬಿದ್ದಿದೆ ಎಂದು ಕೆಮ್ಮನಗುಂಡಿ ತೋಟಗಾರಿಕೆ ಇಲಾಖೆ ವಿಶೇಷ ಅಧಿಕಾರಿ ಎಚ್.ಎಸ್. ರವಿ ಮಾಹಿತಿ ನೀಡಿದ್ದಾರೆ.
ಕೆಮ್ಮನಗುಂಡಿ ಮೇಲ್ಭಾಗದ ದತ್ತಾತ್ರೇಯ ಭವನ ಮತ್ತು ಜಂಗಲ್ ರೆಸಾರ್ಟ್ ನಡುವೆ ಗುಡ್ಡದಿಂದ ಧರೆ ಕುಸಿದು ವಾಹನ ಸಂಚಾರ ಮತ್ತು ಜನ ಸಂಚಾರ ಬಂದಾಗಿದೆ ಎಂದು ತಿಳಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ರಸ್ತೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದು ಗಿರಿ ಪ್ರದೇಶದಲ್ಲಿ ಪದೇ ಪದೇ ಮಳೆ ಸುರಿಯುತ್ತಿದೆ ಎಂದು ತಿಳಿಸಿದ್ದಾರೆ.ಶೃಂಗೇರಿ ಮತ್ತೆ ತುಂಗೆಯ ಪ್ರವಾಹ ಹಲವಡೆ ರಸ್ತೆ ಸಂಪರ್ಕ ಕಡಿತ
ಶೃಂಗೇರಿ: ತಾಲೂಕಿನಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಮಳೆಯಿಂದ ತುಂಗಾ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗಿ ರಾತ್ರಿ ಭಾರತಿ ಬೀದಿ ಕುರುಬಗೇರಿ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೆ ನೀರು ನುಗ್ಗಿ ರಸ್ತೆ ಜಲಾವೃತಗೊಂಡು ಸಂಪರ್ಕ ಮತ್ತೆ ಕಡಿತಗೊಂಡಿದೆ. ಭಾನುವಾರ ಮಧ್ಯಾಹ್ನ ನೀರು ಇಳಿಮುಖವಾಗಿ ಕೆಲಹೊತ್ತು ಸಂಚಾರಕ್ಕೆ ಮುಕ್ತವಾದರೂ ಸೋಮವಾರ ಸಂಜೆ ಮಳೆಯ ಅಬ್ಬರಕ್ಕೆ ಮತ್ತೆ ಜಲಾವೃತ ಗೊಂಡಿತು. ವಿದ್ಯಾರಣ್ಯಪುರ ಶೃಂಗೇರಿ ಸಂಪರ್ಕ ರಸ್ತೆಯೂ ಬಂದ್ ಆಯಿತು. ತುಂಗಾ ಪ್ರವಾಹದಲ್ಲಿ ಹೊಳೆಹದ್ದು ನೆಮ್ಮಾರು ಸಂಪರ್ಕ ತೂಗು ಸೇತುವೆ ಮತ್ತೆ ಅರ್ಧಭಾಗ ಮುಳುಗಡೆಯಾಗಿದೆ.