ಸಾರಾಂಶ
ಕಾರವಾರ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಬಿರುಗಾಳಿಯೂ ಜತೆಗೆ ಸೇರಿಕೊಂಡು ಅವಾಂತರಗಳು ಉಂಟಾಗುತ್ತಿದೆ. ಜತೆಗೆ ಚಂಡಮಾರುತ, ವಾಯುಭಾರ ಕುಸಿತ... ಹೀಗೆ ಕಾರಣಗಳು ಏನೇ ಇದ್ದರೂ ಪರಿಣಾಮ ಮಾತ್ರ ಮಳೆ. ಈ ಬಾರಿ ನಿರಂತರ ಮಳೆಯಿಂದ ರೈತರು, ಮೀನುಗಾರರು ಕಂಗೆಟ್ಟಿದ್ದಾರೆ. ಜೀವನ ನಿರ್ವಹಣೆ ಹೇಗೆಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.
ಶುಕ್ರವಾರ ಕರಾವಳಿಯ ತಾಲೂಕುಗಳ ಕೆಲವೆಡೆ ಭಾರಿ ಮಳೆಯಾಗಿದೆ. ಬಿರುಗಾಳಿಯೂ ಜೋರಾಗಿದ್ದು, ತಾಲೂಕಿನ ಅರಗಾ ಬಳಿ ಐಎನ್‌ಎಸ್ ಕದಂಬ ನೌಕಾನೆಲೆಯ ಗೇಟ್ ಬಳಿ ಭಾರಿ ಮರವೊಂದು ಉರುಳಿಬಿದ್ದು ದನಕ್ಕೆ ಗಂಭೀರ ಗಾಯವಾದರೆ, 5 ಬೈಕ್‌ಗಳು ಜಖಂಗೊಂಡಿವೆ. ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಪೆಂಡಾಲ್ ಕುಸಿದು ವಿದ್ಯಾರ್ಥಿನಿಯೊಬ್ಬಳಿಗೆ ಅಲ್ಪಪ್ರಮಾಣದಲ್ಲಿ ಗಾಯವಾಗಿದೆ. ಜೋಯಿಡಾದಲ್ಲಿ 20ಕ್ಕೂ ಹೆಚ್ಚು ಅಡಕೆ ಮರಗಳು ಉರುಳಿಬಿದ್ದಿವೆ.ಇನ್ನು ನಿರಂತರ ಮಳೆಯಿಂದ ಅಡಕೆ ಬೆಳೆ, ಮೀನುಗಾರಿಕೆ, ಬತ್ತದ ಬೆಳೆಯ ಮೇಲೆ ದುಷ್ಪರಿಣಾಮ ಉಂಟಾಗುವ ಭಯ ಆವರಿಸಿದೆ.
ಅಡಕೆ ಉತ್ತರ ಕನ್ನಡದ ಪ್ರಮುಖ ವಾಣಿಜ್ಯ ಬೆಳೆ. ಈಗ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಅಡಕೆ ಕೊಯ್ಲು ಮಾಡಿದರೆ ಒಣಗಿಸುವುದು ಹೇಗೆಂಬ ಚಿಂತೆ ಕೃಷಿಕರದ್ದಾಗಿದೆ. ಜತೆಗೆ ಸಿಂಗಾರದಲ್ಲಿ ನೀರು ಸಿಲುಕಿ ಬೆಳೆಯೂ ಹಾಳಾದೀತು ಎಂಬ ಕಳವಳ ಉಂಟಾಗಿದೆ. ಈಗಾಗಲೆ ಕೊಳೆ ರೋಗದಿಂದ ಅಡಕೆ ಬೆಳೆಗೆ ಹಾನಿಯಾಗಿದೆ. ತೆಂಗು ಹಾಗೂ ಬಾಳೆಗೆ ಪ್ರಾಣಿಗಳ ಕಾಟ. ತೋಟಗಾರಿಕೆಯನ್ನು ನಂಬಿದವರಲ್ಲಿ ಮುಂದೇನು ಎಂಬ ಪ್ರಶ್ನೆ ಮನೆಮಾಡಿದೆ.ಕರಾವಳಿಯುದ್ದಕ್ಕೂ ಮೀನುಗಾರಿಕೆ ಅವಲಂಬಿಸಿ ಸಾವಿರಾರು ಕುಟುಂಬಗಳಿವೆ. ಮಳೆಗಾಲದಲ್ಲಿ 60 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ. ಆನಂತರ ಭರಪೂರ ಮೀನು ಸಿಗುವ ದಿನಗಳಲ್ಲಿ ಹವಾಮಾನ ವೈಪರೀತ್ಯ, ವಾಯುಭಾರ ಕುಸಿತ, ಚಂಡಮಾರುತ, ಬಿರುಗಾಳಿ ಹೀಗಾಗಿ ಮೀನುಗಾರಿಕೆ ನಡೆಸಬೇಕಾದ ದಿನಗಳಲ್ಲಿ ಬೋಟುಗಳು ಬಂದರುಗಳಲ್ಲಿ ಲಂಗರು ಹಾಕಿದ್ದೇ ಹೆಚ್ಚು. ಹಂಗಾಮಿನಲ್ಲಿ ಸಿಗುವ ಮೀನುಗಳೇ ಮೀನುಗಾರರ ಬದುಕಿಗೆ ಆಧಾರ. ಅದೇ ಈಗ ಕೈತಪ್ಪಿಹೋಗುತ್ತಿದೆ ಎಂಬ ಕನವರಿಕೆ ಮೀನುಗಾರರದ್ದಾಗಿದೆ.
ಬತ್ತದ ಕೊಯ್ಲು ಇನ್ನೇನು ಆರಂಭವಾಗಲಿದೆ. ಈ ಹಂತದಲ್ಲಿ ಮಳೆ ಸುರಿಯುತ್ತಿರುವುದು ಬತ್ತದ ಬೆಳೆಗೆ ಭಾರಿ ಹಾನಿ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಬತ್ತದ ಬೆಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಬತ್ತದ ಬೆಳೆಗೆ ಆಧಾರವಾಗಬೇಕಿದ್ದ ಮಳೆ ಈಗ ಬೆಳೆಯನ್ನೇ ಕಸಿದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಮಳೆ ಗಾಳಿಯಿಂದ ಬತ್ತದ ತೆನೆಗಳು ನೆಲಕ್ಕೊರಗಿವೆ. ಗದ್ದೆಯಲ್ಲಿ ನೀರು ನಿಂತರೆ ಎಲ್ಲ ಬೆಳೆಯೂ ಹಾಳಾಗುವ ಸಾಧ್ಯತೆ ಇದೆ. ಅಕ್ಟೋಬರ್ ಅಂತ್ಯದಲ್ಲೂ ಮಳೆಯಾಗುತ್ತಿರುವುದು ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ಬತ್ತ ಬೆಳೆಗಾರ ಹನುಮಂತ ಗೌಡ ಹೇಳಿದರು.ಗೋಕರ್ಣದಲ್ಲಿ ಮಳೆ, ಪ್ರವಾಸಿಗರಿಗೆ ತೊಂದರೆ: ಶುಕ್ರವಾರ ಮುಂಜಾನೆಯಿಂದ ಗೋಕರ್ಣ ಭಾಗದಲ್ಲಿ ಅಧಿಕ ಮಳೆಯಾಗುತ್ತಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ವಾರಾಂತ್ಯದ ರಜೆಯ ಜತೆ ಮಹಾರಾಷ್ಟ್ರದಲ್ಲಿ ಶಾಲಾ ರಜೆಯ ನಿಮಿತ್ತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು, ಮಳೆ ಅಬ್ಬರಕ್ಕೆ ಕಂಗಾಲಾದರು.ಇಲ್ಲಿನ ಎಲ್ಲ ಪ್ರಮುಖ ದೇವಾಲಯದಲ್ಲಿ ದೇವರ ದರ್ಶನಕ್ಕೆ ದೊಡ್ಡ ಸರದಿ ಸಾಲೇ ನೆರೆದಿದೆ. ಪೇಟೆಯಲ್ಲಿ ವಾಹನ ದಟ್ಟಣೆ ಒಂದೆಡೆಯಾದರೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ರಾಡಿ ನೀರಿನಲ್ಲೇ ಪಾದಚಾರಿಗಳು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಹೊಂಡದಲ್ಲಿ ಬಿದ್ದೇಳುವ ವಾಹನಗಳಿಂದ ನೀರು ಎರಚಿಸಿಕೊಂಡು ಜನರು ಸಾಗುತ್ತಿರುವ ದೃಶ್ಯ ಕಂಡುಬಂತು. ಮಧ್ಯಾಹ್ನದ ಆನಂತರ ಮಳೆ ಕಡಿಮೆಯಾಗಿತ್ತು.ಎಲ್ಲ ಕಡಲತೀರದಲ್ಲಿ ಸಹ ಜನರಿದ್ದು, ಮಳೆ ಲೆಕ್ಕಿಸದೆ ಸಮುದ್ರಕ್ಕಿಳಿದು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಅವರನ್ನು ನಿಯಂತ್ರಿಸಲು ಜೀವರಕ್ಷಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಗಾಳಿ, ಮಳೆಗೆ ಕುಸಿದುಬಿದ್ದ ಕ್ರೀಡಾಕೂಟದ ಪೆಂಡಾಲ್: ಈಶಾನ್ಯ ಮಾನ್ಸೂನ್ ಮಾರುತದ ಪ್ರಭಾವದಿಂದ ಹೊನ್ನಾವರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ಬೆಳಗ್ಗೆ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸುರಿದಿದ್ದ ಮಳೆರಾಯ ಮಧ್ಯಾಹ್ನ ಆಗುತ್ತಲೆ ಇನ್ನು ಹೆಚ್ಚಿಗೆ ಅಬ್ಬರಿಸಿದ. ಮಳೆಯ ಜತೆಯಲ್ಲಿ ಜೋರಾಗಿ ಗಾಳಿ ಸಹ ಬೀಸಿ ಜನರಲ್ಲಿ ಆತಂಕ ಹೆಚ್ಚಿಸಿತ್ತು.ಇನ್ನು ತಾಲೂಕಿನ ಎಸ್.ಡಿ.ಎಂ. ಕ್ರೀಡಾಂಗಣದಲ್ಲಿ ನಡಯುತ್ತಿದ್ದ 17 ವರ್ಷ ವಯೋಮಾನದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೂ ಮಳೆ ಅಡಚಣೆ ಉಂಟು ಮಾಡಿತು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬಂದ ಧಾರಾಕಾರ ಮಳೆ ಹಾಗೂ ಗಾಳಿಗೆ ಕ್ರೀಡಾಕೂಟಕ್ಕೆ ಹಾಕಿದ್ದ ಪೆಂಡಾಲ್ ಕುಸಿದು ಬಿದ್ದಿತು. ಈ ವೇಳೆ ಪೆಂಡಾಲ್‌ನ ಕಂಬ ಬಡಿದು ಓರ್ವ ವಿದ್ಯಾರ್ಥಿನಿಗೆ ಚಿಕ್ಕ ಪ್ರಮಾಣದಲ್ಲಿ ಪೆಟ್ಟಾಗಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಉಳಿದ ಯಾವುದೇ ಕ್ರೀಡಾಪಟುಗಳಿಗೆ ಹಾಗೂ ಪಂದ್ಯದ ಆಯೋಜಕರಿಗೂ ಯಾವುದೇ ತೊಂದರೆಗಳಾಗಿಲ್ಲ.ನಂತರವೂ ಮಳೆ ಮುಂದುವರಿದಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಮಳೆ ತೀವ್ರ ಅಡಚಣೆಯನ್ನು ಉಂಟುಮಾಡಿದ್ದು ಕಂಡುಬಂತು.;Resize=(128,128))
;Resize=(128,128))
;Resize=(128,128))
;Resize=(128,128))