ಸಾರಾಂಶ
ಹಲವು ತಿಂಗಳುಗಳಿಂದ ಮಳೆ ಇಲ್ಲದೆ ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆ ನಗರದ ಹಲವು ಮನೆ, ಹಾಗೂ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಕನ್ನಡಪ್ರಭ ವಾರ್ತೆ ಶಿರಾ ಹಲವು ತಿಂಗಳುಗಳಿಂದ ಮಳೆ ಇಲ್ಲದೆ ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆ ನಗರದ ಹಲವು ಮನೆ, ಹಾಗೂ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ನಗರದಲ್ಲಿ ಕೆಲ ವಾರ್ಡ್‌ಗಳ ಮನೆಗೆ ನೀರು ನುಗ್ಗಿದ್ದರಿಂದ ಜನರಿಗೆ ದಿಕ್ಕೇ ತೋಚದಂತಾಗಿದೆ. ವಾರ್ಡ್ 18ರ ಬೇಗಂ ಮೊಹಲ್ಲಾದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ದವಸಧಾನ್ಯ, ಪೀಟೋಪಕರಣಗಳು ನೀರುಪಾಲಾಗಿವೆ. ಬೇಗಂ ಮೊಹಲ್ಲಾದ ನಿವಾಸಿಗಳಿಗೆ ಮಳೆ ಬಂದರೆ ಪ್ರತಿ ವರ್ಷವೂ ಇದೇ ರೀತಿಯ ಸಂಕಷ್ಟ ಎದುರಾಗುತ್ತಿದೆ. ಸುಮಾರು ಏಳೆಂಟು ವರ್ಷಗಳಿಂದಲೂ ಈ ಭಾಗದ ಜನರು ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪ್ರತಿ ವರ್ಷವೂ ಕೂಡ ಹಲವು ಬಾರಿ ತಮ್ಮ ಅಳಲನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿ ಹಲವು ಬಾರಿ ಮನವಿ ಮಾಡಿದರೂ ಇತ್ತ ಗಮನ ಹರಿಸುತ್ತಿಲ್ಲ. ಮಳೆಗೆ ಬೇಗಂ ಮೊಹಲ್ಲಾದಲ್ಲಿ ಕರುವೊಂದು ಚರಂಡಿಯಲ್ಲಿ ಸಿಲುಕಿಕೊಂಡಿತ್ತು, ಸ್ಥಳೀಯ ಯುವಕರು ಮಳೆಯನ್ನು ಲೆಕ್ಕಿಸದೆ ಕರುವನ್ನು ರಕ್ಷಿಸಿದ್ದಾರೆ. ತಾಲೂಕಿನಲ್ಲಿ ಎಲ್ಲೇಲ್ಲಿ ಎಷ್ಟು ಪ್ರಮಾಣ ಮಳೆ: ತಾಲೂಕಿನಲ್ಲಿ ಕಸಬಾ ಹೋಬಳಿಯಲ್ಲಿ 33.20 ಮಿ.ಮೀ, ಬುಕ್ಕಾಪಟ್ಟಣ ಹೋಬಳಿಯಲ್ಲಿ 32.20 ಮಿ.ಮೀ, ಗೌಡಗೆರೆ ಹೋಬಳಿಯಲ್ಲಿ 38.40 ಮಿ.ಮೀ, ಹುಲಿಕುಂಟೆ ಹೋಬಳಿಯಲ್ಲಿ 35.40 ಮಿ.ಮೀ, ಕಳ್ಳಂಬೆಳ್ಳ ಹೋಬಳಿಯಲ್ಲಿ 26.60 ಮಿ.ಮೀ ಮಳೆಯಾಗಿದೆ. ಇದರಿಂದ ಹಲವು ಕೆರೆ ಕಟ್ಟೆ, ಬ್ಯಾರೇಜ್‌ಗಳಿಗೆ ನೀರು ಬಂದಿದ್ದು, ರೈತರು ಹರ್ಷಗೊಂಡಿದ್ದಾರೆ.