ಸಾರಾಂಶ
ಶಿರಸಿ: ಕಳೆದ ೨ ದಿನಗಳಿಂದ ಸುರಿಯುತ್ತಿರುವ ಮಳೆಗೆ ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಮತ್ತು ರಾಗಿಹೊಸಳ್ಳಿಯ ಮಧ್ಯೆ ಭೂ ಕುಸಿತ ಉಂಟಾಗಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆ.ತಾಲೂಕಿನ ರಾಗಿಹೊಸಳ್ಳಿ ಮತ್ತು ದೇವಿಮನೆ ಮಧ್ಯ ಭಾಗದಲ್ಲಿ ಜು. ೧೬ರಂದು ಬೆಳಗ್ಗೆ ಗುಡ್ಡವೊಂದು ಕುಸಿತಗೊಂಡು ಬೃಹತ್ ಪ್ರಮಾಣದಲ್ಲಿ ಮಣ್ಣು ಹೆದ್ದಾರಿಯನ್ನು ಆವರಿಸಿದೆ.
ಮಂಗಳವಾರ ಬೆಳಗ್ಗೆಯಿಂದ ನಿರಂತರವಾಗಿ ಮಣ್ಣು ತೆರವು ಕಾರ್ಯಾಚರಣೆಯನ್ನು ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಕಂಪನಿ ನಡೆಸುತ್ತಿದೆ. ಮಣ್ಣು ಕುಸಿತವಾಗಿ ಗಿಡ- ಮರಗಳು ರಸ್ತೆಗೆ ಉರುಳಿ ಬೀಳುತ್ತಿರುವುದರಿಂದ ಜು. ೧೮ರ ವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ.ಸಾರ್ವಜನಿಕರು ಶಿರಸಿ- ಯಲ್ಲಾಪುರ ಮಾರ್ಗವಾಗಿ ಕುಮಟಾ, ಅಂಕೋಲಾ, ಕಾರವಾರ, ಶಿರಸಿ- ಶಿವಳ್ಳಿ, ಹೆಗಡೆಕಟ್ಟಾ, ಯಾಣ ಮಾರ್ಗವಾಗಿ ಕುಮಟಾ, ಅಂಕೋಲಾ, ಕಾರವಾರ, ಶಿರಸಿಯಿಂದ ಸಿದ್ದಾಪುರ ಮಾರ್ಗವಾಗಿ ಕುಮಟಾ, ಬಡಾಳ ಮಾರ್ಗವಾಗಿ ಸಂಚರಿಸಬೇಕೆಂದು ಸಹಾಯಕ ಆಯುಕ್ತರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಹೆದ್ದಾರಿಯ ಮೇಲೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಮಳೆ ಸುರಿಯುತ್ತಿರುವುದರಿಂದ ಇನ್ನಷ್ಟು ಮಣ್ಣು ರಸ್ತೆಯ ಮೇಲೆ ಬರುತ್ತಿದೆ. ಯಂತ್ರಗಳು ಸ್ಥಳದಲ್ಲಿಯೇ ಇದ್ದು, ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ. ಗುರುವಾರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ ಎಂದು ಆರ್‌ಎನ್‌ಎಸ್ ಕಂಪನಿ ಎಂಜಿನಿಯರ್ ತಿಳಿಸಿದ್ದಾರೆ.ಭೂ ಕುಸಿತ ಉಂಟಾದ ಶಿರಸಿ ಡಿಎಸ್‌ಪಿ ಕೆ.ಎಲ್. ಗಣೇಶ, ಗ್ರಾಮೀಣ ಠಾಣೆ ಪಿಐ ಪಿ. ಸೀತಾರಾಮ ಭೇಟಿ ನೀಡಿ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಈ ರಸ್ತೆಯ ಮೂಲಕ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.