ಸಾರಾಂಶ
ಹಣ್ಣು, ತರಕಾರಿ, ಬಟ್ಟೆ ಮೊದಲಾದ ಸುಮಾರು 25ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧದ ಟೈಗರ್ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದ್ದು, ಸ್ಟೇಟ್ ಬ್ಯಾಂಕ್ ಪರಿಸರದಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲಾಗಿದೆ.ಈ ವೇಳೆ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ವತಿಯಿಂದ ನೀಡಲಾದ ಗುರುತಿನ ಚೀಟಿ ಹಿಡಿದು ನೂರಕ್ಕಿಂತಲೂ ಅಧಿಕ ವ್ಯಾಪಾರಿಗಳು ಟೈಗರ್ ಕಾರ್ಯಾಚರಣೆಗೆ ಪ್ರತಿರೋಧ ವ್ಯಕ್ತಪಡಿಸಿದರು. ಪಾಲಿಕೆಯೇ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಇದೀಗ ಏಕಾಏಕಿ ಅಂಗಡಿಗಳನ್ನು ತೆರವು ಮಾಡುವುದು ಸರಿಯಲ್ಲ, ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಬಾರದು ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿದರು. ಈ ಸಂದರ್ಭ ಪಾಲಿಕೆ ವಲಯ ಆಯುಕ್ತೆ ರೇಖಾ ಶೆಟ್ಟಿ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಪೊಲೀಸ್ ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ಟೈಗರ್ ಕಾರ್ಯಾಚರಣೆ ಮುಂದುವರಿಯಿತು.
ಹಣ್ಣು, ತರಕಾರಿ, ಬಟ್ಟೆ ಮೊದಲಾದ ಸುಮಾರು 25ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಯಿತು. ಪ್ರತಿಭಟನಾಕಾರರು ಪಾಲಿಕೆ ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಮೇಯರ್, ಪಾಲಿಕೆ ಆಯುಕ್ತರ ನಡೆಯನ್ನು ಖಂಡಿಸಿದರು. ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು.