ಶೃಂಗೇರಿ ತಾಲೂಕಿನಾದ್ಯಂತ ಆರಿದ್ರೆ ಮಳೆ ಅಬ್ಬರ ಮಂದುವರಿದಿದ್ದು ಶನಿವಾರ ರಾತ್ರಿಯಿಡೀ ಗಾಳಿ ಮಳೆ ಆರ್ಭಟಿಸಿ ಭಾನುವಾರವೂ ಮುಂದುವರೆದಿತ್ತು. ಕೆರೆಕಟ್ಟೆ, ಎಸ್ ಕೆ ಬಾರ್ಡರ್ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗೆ । ತಗ್ಗು ಪ್ರದೇಶಗಳ ಜಲಾವೃತ, ಎರಡು ದಿನಗಳಿಂದ ವಿದ್ಯುತ್ ಕಡಿತ
ಕನ್ನಡಪ್ರಭ ವಾರ್ತೆ ಶೃಂಗೇರಿತಾಲೂಕಿನಾದ್ಯಂತ ಆರಿದ್ರೆ ಮಳೆ ಅಬ್ಬರ ಮಂದುವರಿದಿದ್ದು ಶನಿವಾರ ರಾತ್ರಿಯಿಡೀ ಗಾಳಿ ಮಳೆ ಆರ್ಭಟಿಸಿ ಭಾನುವಾರವೂ ಮುಂದುವರೆದಿತ್ತು. ಕೆರೆಕಟ್ಟೆ, ಎಸ್ ಕೆ ಬಾರ್ಡರ್ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದೆ.
ಪ್ರವಾಹ ಪೀಡಿತ ಪ್ರದೇಶಗಳಾದ ಗಾಂಧಿ ಮೈದಾನ, ಬೈಪಾಸ್ ರಸ್ತೆ, ಕುರುಬಗೇರಿ ಸಮೀಪದಲ್ಲೇ ನದಿ ಹರಿಯುತ್ತಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಪ್ರವಾಹದ ಭೀತಿ ಎದುರಾಗಲಿದೆ. ಸತತ ಮಳೆ ಸುರಿಯುತ್ತಿರುವುದರಿಂದ ಹಳ್ಳ, ಕೆರೆಗಳಲ್ಲಿ ನೀರು ತುಂಬಿ ಉಕ್ಕಿ ಹರಿಯುತ್ತಿದೆ. ಕಿಗ್ಗಾ ನರಸಿಂಹ ಪರ್ವತದ ತಪ್ಪಲಿನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿ ಉಪನದಿಗಳಾದ ನಂದಿನಿ, ನಳಿನಿ ನದಿಗಳು ತುಂಬಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಭಾರಿ ಮಳೆ ಜೊತೆ ಗಾಳಿ ಆರ್ಭಟಿಸುತ್ತಿರುವುದರಿಂದ ಮರಗಳು ಧರೆಗುರುಳುತ್ತಿವೆ. ಆದರೆ ಈವರೆಗೂ ಯಾವುದೇ ಹಾನಿಯುಂಟಾಗಿಲ್ಲ.ಶುಕ್ರವಾರ ರಾತ್ರಿಯಿಂದ ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಸ್ಥಗಿತಗೊಂಡಿರುವ ವಿದ್ಯುತ್ ಸಂಪರ್ಕ ಭಾನುವಾರ ಬೆಳಗಿನವರೆಗೂ ಇರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೇ ಕಗ್ಗತ್ತಲು ಉಂಟಾಗಿತ್ತು. ಕಳೆದೆರೆಡು ದಿನಗಳಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದ್ದರಿಂದ ಮೊಬೈಲ್, ದೂರವಾಣಿ ಸಂಪರ್ಕ ಸ್ಥಗಿತಗೊಂಡಿದ್ದವು.
ಮೊಬೈಲ್, ಇಂಟರ್ ನೆಟ್, ಕೆಲವೆಡೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪಟ್ಟಣದಲ್ಲಿ ವಿದ್ಯುತ್ ಇಲ್ಲದೇ ಅಗತ್ಯ ಕೆಲಸ ಕಾರ್ಯಗಳಿಗೆ ಜನರು ಪರದಾಡಬೇಕಾಯಿತು. ಕೆಲ ಹೋಟೇಲುಗಳು ಬಂದ್ ಆಗಿದ್ದವು.ಭಾನುವಾರವೂ ಮುಂಜಾನೆಯಿದಲೇ ಭಾರೀ ಗಾಳಿ ಆರ್ಭಟದೊಂದಿಗೆ ಮಳೆ ಅಬ್ಬರ ಮುಂದುವರಿದಿತ್ತು. ಗಾಳಿಯ ಆರ್ಭಟಕ್ಕೆ ಅಡಕೆ ತೋಟಗಳಲ್ಲಿ ಅಡಕೆ, ಬಾಳೆ ಮರಗಳು ಧರೆಗುರುಳಿ ಬೀಳುತ್ತಿವೆ. ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ, ಭೂಕುಸಿತ ಉಂಟಾಗುತ್ತಿದೆ. ಆದರೆ ಮಳೆಯಿಂದ ಈವರೆಗೆ ಯಾವುದೇ ಹಾನಿ ಕಂಡುಬಂದಿಲ್ಲ.
5 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವುದು.
