ಕನ್ನಡಪ್ರಭ ವಾರ್ತೆ ಹಲಗೂರು
ತಂಬಾಕು ಮುಕ್ತ ಸಮಾಜಕ್ಕಾಗಿ ನಿರಂತರ ಜಾಗೃತಿ ಅತ್ಯಗತ್ಯ ಎಂದು ಜಿಲ್ಲಾ ಸಲಹೆಗಾರ ತಿಮ್ಮರಾಜು ಹೇಳಿದರು.ಸಮೀಪದ ಕರುಳಕಟ್ಟೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮಂಡ್ಯ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ತಂಬಾಕು ಮುಕ್ತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಇಂದಿನ ನಿಮ್ಮ ಉತ್ತಮ ನಿರ್ಧಾರವೇ ನಾಳೆಯ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಎಂದರು.ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರತಿ ವರ್ಷ ವಿಶ್ವಾದ್ಯಂತ 80 ಲಕ್ಷ ಜನರು ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಬಳಕೆಯಿಂದ ಮೃತರಾಗುತ್ತಿದ್ದಾರೆ. ಈ ಮಾರಣಾಂತಿಕ ಚಟವನ್ನು ತಡೆಗಟ್ಟಲು ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು.
ಕೊಟ್ಪಾ ಕಾಯ್ದೆ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆ, ಶಾಲಾ-ಕಾಲೇಜಿನ 100 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ, 21 ವರ್ಷದೊಳಗಿನವರಿಗೆ ಮಾರಾಟ ಮತ್ತು ಸಿಗರೇಟ್/ಬೀಡಿಯನ್ನು ಬಿಡಿಯಾಗಿ ಮಾರಾಟ ಮಾಡಿದರೆ 1000 ರು. ವರೆಗೆ ದಂಡ ವಿಧಿಸಲಾಗುವುದು ಎಂದು ವಿವರಿಸಿದರು.
ಆರೋಗ್ಯ ಮೇಲ್ವಿಚಾರಕ ಶಿವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಹಾನಿಕಾರಕ ದುಶ್ಚಟಗಳಿಂದ ದೂರವಿದ್ದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ವೇದಿಕೆ ಸದಸ್ಯ ಶಿವಣ್ಣ, ಸಮಾಜ ಕಾರ್ಯಕರ್ತ ಮೋಹನ್ ಕುಮಾರ್, ಮೇಲ್ವಿಚಾರಕ ಗಿರೀಶ್ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.