ಸಮಾಜದಲ್ಲಿ ಹೆಣ್ಣು ತನ್ನ ಸಾಧನೆ ಮುಂದುವರೆಸಲು ಸತತ ಪರಿಶ್ರಮ ಮುಖ್ಯ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ, ತುಮಕೂರುಸಮಾಜದಲ್ಲಿ ಹೆಣ್ಣು ತನ್ನ ಸಾಧನೆ ಮುಂದುವರೆಸಲು ಸತತ ಪರಿಶ್ರಮ ಮುಖ್ಯ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅಭಿಪ್ರಾಯಪಟ್ಟರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಲೇಖಕಿಯರ ಸಂಘ, ಮುನ್ನಡೆ ಸಾಮಾಜಿಕ ಸಂಸ್ಥೆ ಹಾಗೂ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಲತಾ ಜಿ.ಕೆ. ಕುಲಕರ್ಣಿ ದತ್ತಿ ಪ್ರಶಸ್ತಿ, ಜಿ. ಸೋಮಾವತಿ ಮತ್ತು ದಿ. ಇಂದಿರಮ್ಮ ಅವರ ನೆನಪಿನ ಸಾಧಕ ಮಹಿಳೆ ದತ್ತಿ ಮತ್ತು ಮಹಿಳಾ ಸಬಲೀಕರಣ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸ್ವಾವಲಂಬನೆ ಸಾಧಿಸಿದ ಮಹಿಳೆ ಆರ್ಥಿಕ ಸ್ವಾತಂತ್ರ್ಯಸಹ ಹೊಂದಬೇಕು ಎಂದು ಕರೆ ನೀಡಿದರು.ಪ್ರತಿ ಹೆಣ್ಣಿನ ನಗುವಿನ ಹಿಂದೆ ಒಂದೊಂದು ಕಥೆ ಇದೆ. ಸಮಾಜದಲ್ಲಿ ಅಸೂಯೆ, ಅಪಹಾಸ್ಯ, ಅಂಕು-ಡೊಂಕುಗಳಿರುತ್ತವೆ. ಅವುಗಳಿಗೆಲ್ಲ ಸಮರ್ಥ ಉತ್ತರ ಎಂದರೆ ಸಾಧನೆ ಮಾತ್ರ. ಯಾವಾಗಲೂ ಸಾಧನೆ ಮಾತನಾಡಬೇಕು. ಆಗ ಹೆಣ್ಣಿನ ಸ್ಥಾನ ಭದ್ರವಾಗುತ್ತದೆ. ಪ್ರತಿ ಹೆಣ್ಣು ತನ್ನ ಅಸ್ತಿತ್ವಕ್ಕಾಗಿ ಮೊದಲು ಆದ್ಯತೆ ನೀಡಬೇಕು. ಹೆಣ್ಣು ಗಂಡು ಸಮಾನತೆಯ ಸಂಕೇತಗಳು ಎಂದು ಅವರು ತಿಳಿಸಿದರು. ಗಂಡಿನ ಜತೆ ಹೆಣ್ಣಿನ ಸ್ಪರ್ಧೆ ಯಾವಾಗಲೂ ಆರೋಗ್ಯ ಪೂರ್ಣವಾಗಿರಬೇಕು ಎಂದು ಅವರು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ವಹಿಸಿದ್ದರು. ಲೇಖಕಿಯರ ಸಂಘದ ಅಧ್ಯಕ್ಷೆ ಆಶಾ ಬಗ್ಗನಡು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ.ಕೆ. ಕುಲಕರ್ಣಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಲತಾ ಜಿ.ಕೆ. ಕುಲಕರ್ಣಿ ದತ್ತಿ ಪ್ರಶಸ್ತಿಯನ್ನು ನಳಿನ, ಮಧುಶ್ರೀ, ಶ್ರೀದೇವಿಯವರಿಗೆ ಹಾಗೂ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿಯನ್ನು ಚಂದ್ರಕಲಾ ರವರಿಗೆ ಪ್ರದಾನ ಮಾಡಲಾಯಿತು. ನಂತರ 10 ಜನ ಮಹಿಳೆಯರೊಂದಿಗೆ ಸಂವಾದ ನಡೆಸಲಾಯಿತು. ನೂರಾರು ಮಹಿಳೆಯರು ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆಶಾ ಬಗ್ಗನಡು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಹಿರಿಯ ಸಾಹಿತಿ ಜಿ.ಕೆ. ಕುಲಕರ್ಣಿ, ಮುನ್ನಡೆ ಸಾಮಾಜಿಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಶೋಧ ಪಿ.ಹೆಚ್., ಜಿ.ಹೆಚ್. ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.