ನಿರಂತರ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ವ್ಯವಸ್ಥೆ

| Published : Jun 30 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡದಿಂದ ಅತ್ಯುತ್ತಮ ಸೇವೆ ಮತ್ತು ಸರ್ಕಾರದ ಆರೋಗ್ಯ ಸೇವೆಗಳು ದೊರಕುತ್ತಿರುವುದು ಸಂತಸ ತಂದಿದೆ. ರಾಜ್ಯದ ಅತ್ಯುತ್ತಮ 10 ಸರ್ಕಾರಿ ಆಸ್ಪತ್ರೆಗಳ ಪಟ್ಟಿಯಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆ ಸೇರಿರುವುದು ಈ ಕ್ಷೇತ್ರದ ಶಾಸಕನಾಗಿ ಹೆಮ್ಮೆ ಎಂದು ಶಾಸಕ ಲಕ್ಷ್ಮಣ ಸವದಿ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡದಿಂದ ಅತ್ಯುತ್ತಮ ಸೇವೆ ಮತ್ತು ಸರ್ಕಾರದ ಆರೋಗ್ಯ ಸೇವೆಗಳು ದೊರಕುತ್ತಿರುವುದು ಸಂತಸ ತಂದಿದೆ. ರಾಜ್ಯದ ಅತ್ಯುತ್ತಮ 10 ಸರ್ಕಾರಿ ಆಸ್ಪತ್ರೆಗಳ ಪಟ್ಟಿಯಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆ ಸೇರಿರುವುದು ಈ ಕ್ಷೇತ್ರದ ಶಾಸಕನಾಗಿ ಹೆಮ್ಮೆ ಎಂದು ಶಾಸಕ ಲಕ್ಷ್ಮಣ ಸವದಿ ಸಂತಸ ವ್ಯಕ್ತಪಡಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಥಣಿ ಸಾರ್ವಜನಿಕ ಆಸ್ಪತ್ರೆ ಹಾಗೂ ಜನಹಿತ ಐಕೇರ್‌ ಸೆಂಟರ್ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ನೇತ್ರ ಉಚಿತ ‌ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ನೇತೃತ್ವದಲ್ಲಿ ಎಲ್ಲ ವೈದ್ಯರ ತಂಡದ ಸೇವೆ ಅತ್ಯುತ್ತಮವಾಗಿರುವುದರಿಂದ ರಾಜ್ಯದಲ್ಲಿ ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ರೀತಿ ಸೇವೆ ಮುಂದುವರಿಯಬೇಕು. ನಿಮ್ಮ ಸೇವೆ ನಿವೃತ್ತಿ ನಂತರವೂ ಜನರು ಸ್ಮರಿಸುವಂತಿರಬೇಕು ಎಂದು ಸಲಹೆ ನೀಡಿದರು.6 ತಿಂಗಳಿಗೊಮ್ಮೆ 2 ಬಾರಿ ನೇತ್ರ ಚಿಕಿತ್ಸ ಶಿಬಿರ ಹಮ್ಮಿಕೊಂಡು ಸುಮಾರು 950ಕ್ಕೂ ಅಧಿಕ ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ನಡೆಸಲು ಕೆಲವು ವೈದ್ಯಕೀಯ ಉಪಕರಣಗಳ ಅಗತ್ಯವಿದೆ. ಅವುಗಳಿಗೆ ಬೇಕಾಗುವ ₹ 16 ಲಕ್ಷ ಒದಗಿಸುತ್ತೇನೆ. ಅಥಣಿ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ತಾಯಿ ಮಕ್ಕಳ ಆಸ್ಪತ್ರೆ ಶೀಘ್ರ:

ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿ ಸ್ಥಳವನ್ನು ಕಂದಾಯ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಶೀಘ್ರವೇ 50 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಅಲ್ಲದೇ, 100 ಹಾಸಿಗೆಯುಳ್ಳ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದರು.ಚಿಕ್ಕೋಡಿ ಡಿಎಚ್ಒ ಡಾ.ಶರಣಪ್ಪ ಗಡಾದ, ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಮಾತನಾಡಿದರು. ತಹಸೀಲ್ದಾರ್‌ ವಾಣಿ.ಯು, ರಾಜೇಶ್ ಬುರ್ಲಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಜಿಪಂ ಉಪವಿಭಾಗದ ಅಭಿಯಂತರ ವೀರಣ್ಣ ವಾಲಿ, ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಶಿವಾನಂದ ಕಾರಜೋಳ, ಜನಹಿತ ಐಕೇರ್ ಸೆಂಟರ್‌ನ ಡಾ.ಕೃಷ್ಣಮೋಹನ ಜಿಂಕಾ ಸೇರಿ ಹಲವರು ಉಪಸ್ಥಿತರಿದ್ದರು.ತಾಲೂಕಾ ವೈದ್ಯಾಧಿಕಾರಿ ಡಾ.ಬಸವರಾಜ ಕಾಗೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ವಿಶ್ವನಾಥ ಮಾಳಿ ನಿರೂಪಿಸಿದರು. ಆರೋಗ್ಯ ಶಿಕ್ಷಣ ಅಧಿಕಾರಿ ಎ.ಬಿ ಗುಳಿದರ ವಂದಿಸಿದರು.

--------------

ಕೋಟ್‌

ತಾಲೂಕು ವೈದ್ಯಾಧಿಕಾರಿ ಡಾ.ಬಸನಗೌಡ ಕಾಗೆ ಅವರ ನೇತೃತ್ವದಲ್ಲಿ ಎಲ್ಲ ವೈದ್ಯರ ತಂಡದ ಸೇವೆ ಅತ್ಯುತ್ತಮವಾಗಿರುವುದರಿಂದ ರಾಜ್ಯದಲ್ಲಿ ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ರೀತಿ ಸೇವೆ ಮುಂದುವರಿಯಬೇಕು. ನಿಮ್ಮ ಸೇವೆ ನಿವೃತ್ತಿ ನಂತರವೂ ಜನರು ಸ್ಮರಿಸುವಂತಿರಬೇಕು.

- ಲಕ್ಷ್ಮಣ ಸವದಿ, ಶಾಸಕ.

--------