ನಿರಂತರ ಪರಿಶ್ರಮ ಯಶಸ್ಸಿನ ರಹದಾರಿ: ವಿವೇಕಾನಂದಗೌಡ ಪಾಟೀಲ

| Published : Oct 12 2025, 01:01 AM IST

ನಿರಂತರ ಪರಿಶ್ರಮ ಯಶಸ್ಸಿನ ರಹದಾರಿ: ವಿವೇಕಾನಂದಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ದಿನವನ್ನು ಎಂಟು ಗಂಟೆಯಂತೆ ಮೂರು ಭಾಗಗಳಲ್ಲಿ ವಿಂಗಡಿಸಿಕೊಂಡು ಎಂಟು ಗಂಟೆ ಪರಿಶ್ರಮ, ಎಂಟು ಗಂಟೆ ನಿದ್ದೆ, ಎಂಟು ಗಂಟೆ ಉಳಿದ ಕಾರ್ಯಗಳಿಗೆ ವಿನಿಯೋಗಿಸುತ್ತ ಪಠ್ಯದ ಜ್ಞಾನದ ಜತೆಗೆ ನೈತಿಕ ಮೌಲ್ಯ, ಸೇವಾ ಮನೋಭಾವ, ಲೋಕಜ್ಞಾನ ಬೆಳೆಸಿಕೊಳ್ಳಬೇಕು.

ಗದಗ: ವಿದ್ಯಾರ್ಥಿಗಳು ಸಮಯ ನಿರ್ವಹಣೆಯ ಕೌಶಲ್ಯ ಮತ್ತು ತಂತ್ರವನ್ನು ಅರಿತರೆ ನಿರ್ದಿಷ್ಟ ಗುರಿ ಸಾಧಿಸಿ ವೈಯಕ್ತಿಕ ತೃಪ್ತಿಯ ಜತೆಗೆ ಸಮಾಜದ ಅಭಿವೃದ್ಧಿ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದರು.

ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025- 26ನೇ ಸಾಲಿನ ಪ್ರಥಮ ವರ್ಷದ ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ವಿವಿಧ ಘಟಕಗಳ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ದಿನವನ್ನು ಎಂಟು ಗಂಟೆಯಂತೆ ಮೂರು ಭಾಗಗಳಲ್ಲಿ ವಿಂಗಡಿಸಿಕೊಂಡು ಎಂಟು ಗಂಟೆ ಪರಿಶ್ರಮ, ಎಂಟು ಗಂಟೆ ನಿದ್ದೆ, ಎಂಟು ಗಂಟೆ ಉಳಿದ ಕಾರ್ಯಗಳಿಗೆ ವಿನಿಯೋಗಿಸುತ್ತ ಪಠ್ಯದ ಜ್ಞಾನದ ಜತೆಗೆ ನೈತಿಕ ಮೌಲ್ಯ, ಸೇವಾ ಮನೋಭಾವ, ಲೋಕಜ್ಞಾನ ಬೆಳೆಸಿಕೊಳ್ಳುವಂತೆ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಸುಧಾ ಕೌಜಗೇರಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸರ್ವಾಂಗೀಣ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು ಹಾಗೂ ಸಮಯವು ಅನಿವಾರ್ಯ ಮತ್ತು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿದ್ದು, ಇದನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡರೆ ಕಳೆದುಕೊಂಡ ಅವಕಾಶಗಳನ್ನು ಮತ್ತೆ ಪಡೆಯಬಹುದು ಎಂದರು.

ಎನ್ಎಸ್ಎಸ್ ಘಟಕದ ಸಂಯೋಜಕ ಅಪ್ಪಣ್ಣ ಹಂಜೆ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ರಮೇಶ ಹುಲಕುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಂಚಾಲಕ ಡಾ. ಜಿತೇಂದ್ರ ಜಹಾಗೀರದಾರ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕ ಬುಳ್ಳಪ್ಪ, ಕ್ರೀಡಾ ವಿಭಾಗದ ಸಂಚಾಲಕ ಮಹಾಂತೇಶ ಮಾತನಾಡಿದರು.

ಕಾಲೇಜಿನಿಂದ ವರ್ಗಾವಣೆಯಾಗಿರುವ ಡಾ. ಸಂಗೀತಾ ಕಲಾಲ, ಕಾಲೇಜಿನಲ್ಲಿ ಪದವಿ ಪೂರೈಸಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು, ರಾಜ್ಯಮಟ್ಟದ ಅಧ್ಯಾಪಕ ಭೂಷಣ ಪ್ರಶಸ್ತಿಗೆ ಭಾಜನರಾಗಿರುವ ವನಮಾಲಾ ಖಾನಗೌಡ್ರ ಅವರನ್ನು ಸನ್ಮಾನಿಸಲಾಯಿತು. ಕರಿಯಪ್ಪ ಕೊಡವಳ್ಳಿ ನಿರೂಪಿಸಿದರು. ರೆಡ್‌ಕ್ರಾಸ್ ಸಂಚಾಲಕಿ ಮಹಾನಂದಾ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.