ದೇಶದ ಸಂವಿಧಾನಕ್ಕೆ ನಿರಂತರ ಅಪಮಾನ ಅಪಾಯಕಾರಿ

| Published : Jan 03 2025, 12:34 AM IST

ಸಾರಾಂಶ

CITU State Vice President K. Prakash's opinion

-ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ ಅಭಿಮತ । ಅರುಣೋದಯ ಅಭಿನಂದನಾ ಗ್ರಂಥ ಬಿಡುಗಡೆ । ಗೌರವ ಸನ್ಮಾನ ಸಮಾರಂಭ

------

ಕನ್ನಡಪ್ರಭ ವಾರ್ತೆ ರಾಯಚೂರು

ದೇಶದ ಸಂವಿಧಾನಕ್ಕೆ ನಿರಂತರ ಅಪಮಾನ ಮಾಡಲಾಗುತ್ತಿದ್ದು, ಇದು ಅಪಾಯಕಾರಿ ಬೆಳವಳಿಗೆ ಎಂದು ಸಿಪಿಐಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಯಚೂರು ಮತ್ತು ಕೊಪ್ಪಳದ ಚಂದ್ರಶೇಖರ ಬಾಳೆಯವರ ಒಡನಾಡಿಗಳ ಬಳಗದಿಂದ ಹಮ್ಮಿಕೊಂಡಿದ್ದ ಅವಿಭಜಿತ ರಾಯಚೂರು ಜಿಲ್ಲೆಯ ಜನ ಚಳವಳಿಗಳ ಇತಿಹಾಸ ಅನಾವರಣಗೊಳಸಿರುವ ಚಂದ್ರಶೇಖರ ಬಾಳೆ ಅಭಿನಂದನಾ ಗ್ರಂಥ ಅರುಣೋದಯ ಬಿಡುಗಡೆ ಹಾಗೂ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತಕ್ಕೆ ಸ್ವಾತಂತ್ರ್ಯದ ಜೊತೆಗೆ ಸಂವಿಧಾನ ಜಾರಿಗೊಂಡು ಏಳೂವರೆ ದಶಕ ಕಳೆದರು ಸಂವಿಧಾನ ಅಪಾಯದಲ್ಲಿದೆ. ದೇಶದ ಸ್ವಾತಂತ್ರ್ಯ ಪಡೆದುಕೊಂಡ ಹಾದಿಯಲ್ಲಿಯೇ ಹಲವಾರು ತೊಂದರೆಗಳಿರುವುದರಿಂದ ಇಂದು ಸಂವಿಧಾನಕ್ಕೆ ಹಾನಿಯನ್ನುಂಟು ಮಾಡುವ ಕೃತ್ಯಗಳು ನಡೆಯುತ್ತಿವೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರೇ ಸಂವಿಧಾನ ಅಪಾಯಕ್ಕೆ ತಳ್ಳುವಂತಹ ಹೇಳಿಕೆಗಳನ್ನು ನೀಡಿ ಅವಮಾನಿಸುತ್ತಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಜನಪರ ಕಾಳಜಿ, ಸಮಾಜದಲ್ಲಿ ಸಮಾನತೆ ತರಬೇಕು, ಸಮಗ್ರ ಅಭಿವೃದ್ಧಿ ಹೊಂದಬೇಕು ಎನ್ನುವ ಚಿಂತನೆಗಳನ್ನು ಹೊಂದಿ ನಿರಂತರ ಕನಸು ಕಾಣುವ ಎಡಪಂಥೀಯರ ವಿಚಾರಗಳು ದೇಶಕ್ಕೆ ಅಗತ್ಯ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಅವರ ಹೋರಾಟಗಳಿಗೆ ಪೂರಕ ಪರಿಸರವು ಇಲ್ಲವಾಗಿದ್ದು, ಇದರ ನಡುವೆ ನಾವೆಲ್ಲರೂ ಸೇರಿಕೊಂಡು ಅಸಮಾನತೆ, ಬಂಡವಾಳಶಾಹಿ ಪರ ಆಡಳಿತ ನಡೆಸುವವರನ್ನು ಮಣಿಸಲು ಪರಿಣಾಮಕಾರಿ ಹೋರಾಟ ಕಟ್ಟಬೇಕಾಗಿದೆ ಎಂದರು.

ಸಾಹಿತಿ ವೀರ ಹನುಮಾನ ಮಾತನಾಡಿ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಸರ್‌ಕಲ್ ನಲ್ಲಿ ತಮ್ಮ ಬಾಲ್ಯ ಕಳೆದ ಚಂದ್ರಶೇಖರ್ ಬಾಳೆ ಅವರು ಧಾರವಾಡದಲ್ಲಿ ಕಾನೂನು ಪದವಿ ಪಡೆದು ತದನಂತರ ಹೋರಾಟಕ್ಕೆಇಳಿದರು.

ಈ ಭಾಗದಲ್ಲಿ ಕಮ್ಯುನಿಷ್ಟ ಚಳವಳಿ ಪ್ರಾರಂಭಿಸಿ ತುಂಗಭದ್ರಾ ಎಡದಂಡೆ ಮತ್ತು ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣಕ್ಕೆ ಹಲವಾರು ರೀತಿಯಲ್ಲಿ ನಡೆಸಿದ ಹೋರಾಟ ಕಾರಣ. ಅದರ ಹಿಂದೆ ಬಾಳೆ ಅವರು ಇದ್ದಾರೆ ಎಂದರು.

ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ, ಚಿಂತಕ ಆರ್.ಕೆ.ಹುಡಗಿ, ಎಸ್.ವೈ.ಗುರುಶಾಂತ್, ಶ್ಯಾಮಲಾ ಪುರುಷೋತ್ತಮ ಕಲಾಲಬಂಡಿ, ಕಮಲಾ ಬಾಳೆ, ರಾಮನಗೌಡ ಜಾಲಿಬೆಂಚಿ, ರಂಜನ ಪರಂಜಪೆ, ವೀರನಗೌಡ, ಬಸವರಾಜ ಕಳಸ, ಟಿ.ಯಶವಂತ, ಬಿ.ಬಸವರಾಜ್, ಬುಡ್ಡನಗೌಡ, ಕರಿಯಪ್ಪ ಅಚ್ಚೋಳ್ಳಿ, ಎಚ್.ಪದ್ಮಾ ಸೇರಿ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಬಳಗದವರು, ಹೋರಾಟಗಾರರು ಇದ್ದರು.

ಪ್ರತಿಭಾ ಗೋನಾಳ್ ಪ್ರಾರ್ಥಿಸಿದರು. ಬಿ.ಲಿಂಗಪ್ಪ ಸ್ವಾಗತಿಸಿದರು, ಬಸವರಾಜ ಕಳಸ ವಂದಿಸಿದರು.

-----------------

02ಕೆಪಿಆರ್‌ಸಿಆರ್ 01: ರಾಯಚೂರು ಜಿಲ್ಲೆಯ ಜನ ಚಳವಳಿಗಳ ಇತಿಹಾಸ ಅನಾವರಣಗೊಳಸಿರುವ ಚಂದ್ರಶೇಖರ ಬಾಳೆ ಅಭಿನಂದನಾ ಗ್ರಂಥ ಅರುಣೋದಯ ಬಿಡುಗಡೆ ಹಾಗೂ ಗೌರವ ಸನ್ಮಾನ ಸಮಾರಂಭ ನಡೆಯಿತು.