ಸಾರಾಂಶ
ಹುಬ್ಬಳ್ಳಿ: ಅನ್ನದಾತ ಕಷ್ಟಪಟ್ಟು ಉತ್ತಿ, ಬಿತ್ತಿ ಬೆಳೆದಾಗ ಮಾತ್ರ ನಾವೆಲ್ಲ ಸೌಖ್ಯವಾಗಿರಲು ಸಾಧ್ಯ. ಅಂತಹ ರೈತನು ಬೆಳೆಯುವ ಬೆಳೆಗಳಿಗೆ ನಿರಂತರ ವಿದ್ಯುತ್ ಪೂರೈಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೆಸ್ಕಾಂನ ನೂತನ ಅಧ್ಯಕ್ಷ ಸಯ್ಯದ ಅಜೀಮ್‌ಪೀರ್ ಖಾದ್ರಿ ಹೇಳಿದರು.
ಅವರು ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿ ಮಾತನಾಡಿ, ರೈತನಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಒದಗಿಸಿದರೆ ಬೆಳೆ ಬೆಳೆಯಲು ಸಾಧ್ಯ. ಸಕಾಲಕ್ಕೆ ಉತ್ತಮ ಬೆಳೆ ಬಂದಾಗ ಮಾತ್ರ ನಾಡು ಸುಭೀಕ್ಷವಾಗಿರಲು ಸಾಧ್ಯ. ಹೀಗಾಗಿ ರೈತರಿಗೆ ಆದ್ಯತೆಯ ಮೇರೆಗೆ ವಿದ್ಯುತ್ ಒದಗಿಸಲಾಗುವುದು ಎಂದರು.ಬಡವರ ಪಾಲಿನ ಕಲ್ಪವೃಕ್ಷ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನನ್ನ ಮೇಲೆ ನಂಬಿಕೆ ಇಟ್ಟು ಈ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಉಚಿತ ವಿದ್ಯುತ್ ಕಲ್ಪಿಸುವ ಮೂಲಕ ಕಾಂಗ್ರೆಸ್ ಬಡವರ ಪಾಲಿನ ಕಲ್ಪವೃಕ್ಷವಾಗಿದೆ. ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ವಿದ್ಯುತ್ ಪೂರೈಕೆಯೂ ಒಂದು. ಆ ಯೋಜನೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಇಲಾಖೆಯಲ್ಲಿನ ಸೋರಿಕೆಯನ್ನು ತಡೆಗಟ್ಟುವಲ್ಲಿ ಹೆಚ್ಚಿನ ಮುತವರ್ಜಿ ವಹಿಸಲಾಗುವುದು. ಅವ್ಯವಹಾರ ಎಸಗುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷ್ಯಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಕುಂದು-ಕೊರತೆ ನೀಗಿಸುವೆ
ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿನ ಕುಂದು ಕೊರತೆಗಳನ್ನು ನೀಗಿಸುವುದರ ಜತೆಗೆ ಪಕ್ಷಕ್ಕೆ ಹೆಸರು ತಂಡುಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತೇನೆ. ಅಲ್ಲದೆ, ನನ್ನ ಆಡಳಿತಾವಧಿಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.ಸವಣೂರಿನ ದೊಡ್ಡ ಹುಣಸೆ ಮಠದ ಚನ್ನಬಸವ ಶ್ರೀಗಳು ಮಾತನಾಡಿ, ಹೆಸ್ಕಾಂ ಅಧ್ಯಕ್ಷ ಸಯ್ಯದ ಅಜೀಮ್‌ಪೀರ ಖಾದ್ರಿ ಅವರು ಎಂದಿಗೂ ಜಾತಿ, ಧರ್ಮಕ್ಕೆ ಅಂಟಿಕೊಂಡವರಲ್ಲ. ಹಲವು ವರ್ಷಗಳಿಂದ ತಮ್ಮ ರಾಜಕೀಯ ಜೀವನದಲ್ಲಿ ಜಾತ್ಯಾತೀತವಾಗಿ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಖಾದ್ರಿ ಅವರಿಗೆ ಪಕ್ಷದ ಮೇಲಿನ ಪ್ರೀತಿ, ನಂಬಿಕೆಗೆ ತಕ್ಕಂತೆ ಅವರಿಗೆ ಹೆಸ್ಕಾಂ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಖಾದ್ರಿ ಕತ್ತಲಾದ ಮನೆಗೆ ಬೆಳಕನ್ನು ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರಲ್ಲಿ ಅವರು ಯಶಸ್ವಿ ಕೂಡ ಆಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ಧರ್ಮ ಗುರುಗಳಾದ ಶಿಗ್ಗಾಂವಿ ವಿರಕ್ತಿಮಠದ ಶ್ರೀಗಳು, ಸದಾಶಿವಪೇಟೆಯ ಶ್ರೀಗಳು, ಶಹಜಾದೇ ಪೀರಾ ಖಾದ್ರಿ, ಸಯ್ಯದ ಅಜ್ಮತ್ ರಜಾಕ್, ಮೌಲಾನಾ ಸೈಯದ ನಿಸಾರ ಅಹ್ಮದ, ಅಲ್ಲಿಮುದ್ದೀನ್, ಸಯ್ಯದ್ ತಾಜುದ್ದೀನ ಖಾದ್ರಿ, ನಾಸಿರ್ ಅಹ್ಮದ ಸೇರಿದಂತೆ ಹಲವರಿದ್ದರು.ಅಧಿಕಾರ ಸ್ವೀಕರಿಸಿದ ಖಾದ್ರಿವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಮ್ಮ ನೂತನ ಕಚೇರಿಯಲ್ಲಿ ಸೈಯದ್ ಅಜೀಮ್‌ಪೀರ ಖಾದ್ರಿ ಅವರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಅವರಿಂದ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಜಮೀರ್ ಅಹ್ಮದ ಖಾನ್, ಶಾಸಕರಾದ ಶ್ರೀನಿವಾಸ ಮಾನೆ, ಯಾಸಿರ್ ಖಾನ್ ಪಠಾಣ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಸೇರಿದಂತೆ ಹಲವರಿದ್ದರು.