ಸಾರಾಂಶ
ಉಡುಪಿ ಜಿಲ್ಲೆಯಲ್ಲಿಯೇ ಕಾರ್ಯಾಚರಿಸುತ್ತಿರುವ ಅದಾನಿ ಕಂಪನಿಯ ಉಷ್ಣ ವಿದ್ಯುತ್ ಸ್ಥಾವರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 24 x 7 ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆಯಲ್ಲಿಯೇ ಕಾರ್ಯಾಚರಿಸುತ್ತಿರುವ ಅದಾನಿ ಕಂಪನಿಯ ಉಷ್ಣ ವಿದ್ಯುತ್ ಸ್ಥಾವರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 24 x 7 ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.ಈ ಬಗ್ಗೆ ಶನಿವಾರ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ 2010ರಿಂದ ಕಾರ್ಯಾಚರಿಸುತ್ತಿರುವ ಈ ಉಷ್ಣ ವಿದ್ಯುತ್ ಸ್ಥಾವರವು ಪ್ರಸ್ತುತ 1300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇಲ್ಲಿಂದ ರಾಜಧಾನಿ ಬೆಂಗಳೂರಿಗೆ ಶೇ.45ರಷ್ಟು ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ತಮ್ಮ ವಿರೋಧ ಇಲ್ಲ, ಆದರೆ ಈ ಸ್ಥಾವರ ಅಸ್ತಿತ್ವದಲ್ಲಿರುವ ಅವಳಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದಕ್ಕೆ ತಮ್ಮ ವಿರೋಧವಿದೆ. ಮೊದಲು ಈ ಅವಳಿ ಜಿಲ್ಲೆಗಳಿಗೆ ಮೊದಲು ಅಗತ್ಯವಿರುವ ವಿದ್ಯುತ್ ಪೂರೈಕೆ ಮಾಡಿ, ನಂತರ ಬೇರೆಡೆಗೆ ಕಳುಹಿಸಲಿ ಎಂದವರು ಆಗ್ರಹಿಸಿದರು.ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಈ ಯೋಜನೆ ಜಾರಿಗೆ ಬರಲು ತಮ್ಮ ಸಮಿತಿ ನಿರಂತರವಾಗಿ 6 ವರ್ಷಗಳ ಕಾಲ ಹೋರಾಟ ಮಾಡಿತ್ತು. ಯೋಜನೆ ಜಾರಿಗೆ ಬಂದ ಮೇಲೆ ಆಂದಿನ ಸರ್ಕಾರದ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕೊಲ್ಲೂರಿಗೆ ಬಂದಿದ್ದಾಗ, ತಾವು ಅವರನ್ನು ಭೇಟಿಯಾಗಿ ಅವಳಿ ಜಿಲ್ಲೆಗಳಿಗೆ ನಿರಂತರ 24 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದ್ದೇವು. ಅದಕ್ಕೆ ಸಚಿವರು ಒಪ್ಪಿದ್ದು, ಸ್ಥಳದಲ್ಲಿಯೇ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಉಷ್ಣ ಸ್ಥಾವರದ ಪ್ರಮುಖರಿಗೆ ಸೂಚನೆ ನೀಡಿದ್ದರು.
ಆದರೆ ಈ ಸೂಚನೆ ಇನ್ನೂ ಜಾರಿಗೆ ಬಂದಿಲ್ಲ. ಇಂದು ಎರಡೂ ಜಿಲ್ಲೆಗಳಲ್ಲಿ ವಿದ್ಯುತ್ ಸಮಸ್ಯೆ ಇದೆ. ಇದರಿಂದ ಕೃಷಿಕರು, ಉದ್ಯಮಿಗಳು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣ ಈ ಎರಡೂ ಜಿಲ್ಲೆಗಳಿಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯಾಗುವಂತೆ ಮಾಡಬೇಕು. ಈ ಬಗ್ಗೆ ಈಗಾಗಲೇ ಈಗಿನ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸಮಿತಿ ವತಿಯಿಂದ ಪತ್ರ ಬರೆಯಲಾಗಿದೆ. ಈ ತಿಂಗಳೊಳಗೆ ಅವರನ್ನು ಸಮಿತಿಯ ನಿಯೋಗವು ಭೇಟಿಯಾಗಿ ಚರ್ಚಿಸಲಿದೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉಪಾಧ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ, ಪ್ರೊ. ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.