ವಾರದಿಂದ ಸತತ ಮಳೆ: ಕೊಡಗಿನಲ್ಲಿ ಮಂದಹಾಸ

| Published : May 20 2024, 01:32 AM IST

ಸಾರಾಂಶ

ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ಜನರಲ್ಲಿ ಸಂತಸ ಮೂಡಿಸಿದೆ. ಜಲಮೂಲಗಳಲ್ಲಿ ನೀರಿನ ಹರಿವು ಆರಂಭವಾಗಿದೆ.

ವಿಘ್ನೇಶ್‌ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರಲ್ಲಿ ಸಂತಸ ಮೂಡಿದೆ. ಜಿಲ್ಲೆಯ ಪ್ರಮುಖ ನದಿ ಕಾವೇರಿ ಸೇರಿದಂತೆ ಇತರೆ ಜಲ ಮೂಲಗಳಲ್ಲಿ ನೀರಿನ ಹರಿವು ಆರಂಭವಾಗಿದ್ದು, ಮತ್ತೆ ಜೀವ ಕಳೆ ಬಂದಿದೆ. ಮತ್ತೊಂದು ಕಡೆ ಕುಡಿಯುವ ನೀರಿನ ಅಭಾವ ಆತಂಕ ಸ್ವಲ್ಪಮಟ್ಟಿಗೆ ದೂರವಾಗಿದೆ.

ಕಳೆದ ವರ್ಷ ಕೊಡಗಿನಲ್ಲಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿಯ ಬೇಸಗೆಯಲ್ಲಿ ನೀರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಏಪ್ರಿಲ್ ತಿಂಗಳಲ್ಲೇ ಜಿಲ್ಲೆಯ ಜೀವ ನದಿ ಕಾವೇರಿ ಸಂಪೂರ್ಣ ಬತ್ತಿ ಹೋಗಿತ್ತು. ಇದರಿಂದ ಜಲಚರಗಳು ಕೂಡ ಸಾವನಪ್ಪಿದ್ದವು. ಅಲ್ಲದೆ ವಿವಿಧ ಜಲ ಮೂಲಗಳಲ್ಲಿ ನೀರು ಖಾಲಿಯಾಗಿ ಜನ, ಜಾನುವಾರುಗಳು ಪರಿತಪಿಸುವಂತಾಗಿತ್ತು.

ಕಾವೇರಿ ನದಿ ಬತ್ತಿ ಹೋಗಿದ್ದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ನದಿ ನೀರನ್ನು ಅವಲಂಭಿಸಿದ್ದವರಿಗೆ ತೀವ್ರ ತೊಂದರೆ ಉಂಟಾಗಿ, ಕೆಲವು ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮಳೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಆತಂಕ ಕಡಿಮೆಯಾಗಿದೆ. ನದಿ ನೀರು ಶುದ್ಧವಾದ ಬಳಿಕ ಎಂದಿನಂತೆ ಕುಡಿಯುವ ನೀರು ಸಬರಾಜು ಮಾಡುವ ಕೆಲಸ ಆರಂಭವಾಗಲಿದೆ.

ಪ್ರವಾಸಿ ತಾಣ ದುಬಾರೆಯಲ್ಲಿ ಕೂಡ ಕಾವೇರಿ ನದಿ ನೀರು ಸಂಪೂರ್ಣ ಬತ್ತಿ ಹೋಗಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಸಾಕಾನೆಗಳಿಗೆ ಸ್ನಾನಕ್ಕೂ ನೀರಿಲ್ಲದ ಪರಿಸ್ಥಿತಿ ಉಂಟಾಗಿತ್ತು. ಇದೀಗ ಸುರಿದ ಮಳೆಯಿಂದ ನೀರು ಹರಿವು ಆರಂಭವಾಗಿದ್ದು, ಆನೆಗಳಿಗೂ ಹಾಗೂ ಪ್ರವಾಸಿಗರಿಗೂ ಸಂತಸ ಮೂಡಿಸಿದೆ.

ತ್ರಿವೇಣಿ ಸಂಗಮದಲ್ಲಿ ನೀರು: ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯ ಪರಿಣಾಮ ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕುಸಿದಿತ್ತು. ಇದರಿಂದ ಪುಣ್ಯ ಸ್ನಾನ ಹಾಗೂ ಪಿಂಡ ಪ್ರದಾನ ಮಾಡಲು ಭಕ್ತರಿಗೆ ತೊಡಕುಂಟಾಗಿತ್ತು. ತ್ರಿವೇಣಿ ಸಂಗಮದಲ್ಲೇ ಜಲ ಮೂಲ ಬತ್ತಿದ ಕಾರಣ ಕಾವೇರಿ ನದಿ ಹರಿದು ಹೋಗುವ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ಉಂಟಾಯಿತು. ಇದೀಗ ಕಳೆದೊಂದು ವಾರದಿಂದ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮ ಕೂಡ ನೀರು ತುಂಬಿ ಹರಿಯುತ್ತಿದೆ. ಇದರಿಂದ ಸಂಗಮಕ್ಕೆ ಬಂದ ಭಕ್ತರು ಸಂತಸಗೊಂಡಿದ್ದಾರೆ.

ಅಂತರ್ಜಲ ಮಟ್ಟ ಏರಿಕೆ: ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕೂಡ ಏರಿಕೆ ಕಂಡಿದೆ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ಆರಂಭದಲ್ಲಿ ಕೊಡಗಿನಲ್ಲಿ ತೀವ್ರ ಬಿಸಿಲಿನ ವಾತಾವರಣ ಇದ್ದ ಕಾರಣ ಅಂತರ್ಜಲ ಮಟ್ಟ ತೀರಾ ಕುಸಿತ ಕಂಡಿತ್ತು. ಇದರಿಂದ ಬೋರ್‌ವೆಲ್‌ಗಳಲ್ಲಿ ನೀರು ಸರಬರಾಜು ಮಾಡಲು ತೊಡಕುಂಟಾಗಿತ್ತು. ಬೋರ್‌ವೆಲ್‌ ಬಳಸಿ ಕೃಷಿ ಚಟುವಟಿಕೆಲ್ಲಿ ತೊಡಗಿದ್ದವರಿಗೂ ಕೂಡ ಸಮಸ್ಯೆ ಎದುರಾಗಿತ್ತು. ಇದೀಗ ಮಳೆಯಿಂದ ನೀರು ಸರಾಗವಾಗಿ ದೊರಕುತ್ತಿದ್ದು, ಸಮಸ್ಯೆ ನೀಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.

ಬೆಳೆಗಾರರಿಗೆ ನಿಟ್ಟುಸಿರು: ಕಳೆದ ಮೂರು ತಿಂಗಳಿನಿಂದ ತೀವ್ರ ಬಿಸಿಲು ಹಾಗೂ ಹಿಂಗಾರು ಮಳೆ ಕೊರತೆಯಿಂದಾಗಿ ಕೊಡಗಿನಲ್ಲಿ ಕಾಫಿ ಹಾಗೂ ಕಾಳು ಮೆಣಸು ಕೃಷಿಗೆ ತೀವ್ರ ಸಮಸ್ಯೆ ಉಂಟಾಗಿತ್ತು. ಇದರಿಂದ ಕೃಷಿ ಹೊಂಡಗಳಿಂದ ನೀರನ್ನು ಸ್ಪ್ರಿಂಕ್ಲರ್ ಗಳ ಮೂಲಕ ಹಾರಿಸಿ ಕಾಫಿ ಹೂವು ಅರಳಿಸಿದ್ದರು. ಇದರಿಂದ ಬಹುತೇಕ ಕೆರೆಗಳು ಖಾಲಿಯಾಗಿತ್ತು. ಅಲ್ಲದೆ ಕಾಫಿ ಫಸಲು ಬೆಳವಣಿಗೆಗೂ ತೊಂದರೆಯಾಗಿತ್ತು. ಬಿಸಿಲಿನಿಂದಾಗಿ ಕಾಳು ಮೆಣಸು ಬಳ್ಳಿ ಕೂಡ ಸೊರಗಿ ಹೋಗಿತ್ತು. ಇದೀಗ ಹಲವು ಕಡೆ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆಗಳಲ್ಲೂ ಸ್ವಲ್ಪ ಪ್ರಮಾಣದಲ್ಲಿ ನೀರು ತುಂಬಿದೆ. ಕಾಫಿ ತೋಟಕ್ಕೂ ನೀರು ಪೂರಕವಾಗಿ ದೊರಕಿದೆ. ದುಬಾರೆ ಜಲ ಕ್ರೀಡೆ ಆರಂಭ: ಮಳೆಯಿಂದಾಗಿ ಕಾವೇರಿ ನದಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರದ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಸ್ಟಿಲ್ ವಾಟರ್ ರಿವರ್ಗ್ ರಾಫ್ಟಿಂಗ್‌ಗೆ ಚಾಲನೆ ನೀಡಲಾಗಿದೆ. ಇದರಿಂದ ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ದುಬಾರೆಯಲ್ಲಿ ಜಲ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದೀಗ ಮಳೆ ಬಂದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರು ಹರಿಯಲಾರಂಭಿಸಿದೆ. ಆದರೆ ಸದ್ಯಕ್ಕೆ ನೀರು ಕಲುಷಿತಗೊಂಡಿರುತ್ತದೆ. ಇದರಿಂದ ಮಾದಪಟ್ಟಣ, ಬಸವನಹಳ್ಳಿಗೆ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡುತ್ತಿದ್ದೇವೆ. ಶುದ್ಧವಾದ ಬಳಿಕ ಕಾವೇರಿಯಿಂದ ನೀರು ಹರಿಸಲಾಗುವುದು. ಮಳೆ ಬಂದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ ಕಂಡಿದ್ದು, ಬೋರ್ವೆಲ್ ಗಳ ಮೂಲಕ ಕೂಡ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಪಿಡಿಒ ಸುಮೇಶ್ ಹೇಳಿದರು.

ಮಳೆಯ ಅಭಾವದಿಂದಾಗಿ ದುಬಾರೆಯಲ್ಲಿ ಕಾವೇರಿ ನದಿ ಸಂಪೂರ್ಣ ಬತ್ತಿ ಹೋಗಿತ್ತು. ಇದೀಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಹರಿಯಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಸ್ಟಿಲ್ ವಾಟರ್ ರಿವರ್ ರ್ಯಾಫ್ಟಿಂಗ್ ಆರಂಭಿಸಲಾಗಿದೆ. ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದು ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದರು.