ಸಾರಾಂಶ
ಸುಬ್ರಹ್ಮಣ್ಯದಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿಯೂ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಉಭಯ ನದಿಗಳು ಸಂಗಮಿಸುವ ಉಪ್ಪಿನಂಗಡಿಯ ಬಳಿಯ ನೇತ್ರಾವತಿ ನದಿಯು ಸಹಜ ಜೀವ ಕಳೆಯೊಂದಿಗೆ ಹರಿಯುತ್ತಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕೆಲ ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡರಲ್ಲೂ ನೀರಿನ ಹರಿವಿನಲ್ಲಿ ಚೇತರಿಕೆ ಕಂಡು ಬಂದಿದೆ. ಮುಂಗಾರು ಪೂರ್ವ ಮಳೆಯು ಕೃಷಿ ಚಟುವಟಿಕೆಗೆ ಚಾಲನೆ ನೀಡುವಂತೆ ಮಾಡಿದೆ.ಪರಿಸರದಲ್ಲಿ ಬಿರು ಬಿಸಿಲು, ಅತೀವ ಸೆಕೆ, ಪದೇ ಪದೆ ಮೋಡ ಕವಿದ ವಾತಾವರಣ, ಸಂಜೆ ವೇಳೆಗೆ ಮಳೆ ಹೀಗೆ ದಿನದಲ್ಲಿ ಎಲ್ಲ ವಾತಾವರಣದ ವೈವಿಧ್ಯತೆಯ ಅನುಭವ ಆಗುತ್ತಿದೆ. ವಾರದ ಹಿಂದೆ ಆವರಿಸಿದ್ದ ನೀರಿನ ಕೊರತೆಯ ಭೀತಿ ದೂರವಾಗಿದೆ. ಪ್ರತಿ ದಿನ ಮಳೆ ಸುರಿಯುತ್ತಿರುವುದರಿಂದ ಕೃಷಿ ಬೆಳೆಗಳಿಗೆ ಪ್ರಾಕೃತಿಕವಾಗಿ ನೀರು ಒದಗಿಸಿದಂತಾಗುತ್ತಿದೆ.
ಇತ್ತ ಸುಬ್ರಹ್ಮಣ್ಯ ಪರಿಸರದಲ್ಲಿಯೂ ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯದಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿಯೂ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಉಭಯ ನದಿಗಳು ಸಂಗಮಿಸುವ ಉಪ್ಪಿನಂಗಡಿಯ ಬಳಿಯ ನೇತ್ರಾವತಿ ನದಿಯು ಸಹಜ ಜೀವ ಕಳೆಯೊಂದಿಗೆ ಹರಿಯುತ್ತಿದೆ.ಉದ್ಭವ ಲಿಂಗ ಸ್ಥಳ ಗೋಚರ: ಈ ಬಾರಿ ಬಿಳಿಯೂರು ಅಣೆಕಟ್ಟಿನ ಹಿನ್ನೀರಿನ ಕಾರಣಕ್ಕೆ ಉದ್ಭವ ಲಿಂಗಕ್ಕೆ ಯಾವುದೇ ಪೂಜೆಗಳು ನಡೆದಿರಲಿಲ್ಲ. ಇದೀಗ ಅಣೆಕಟ್ಟಿನ ಎಲ್ಲ ಗೇಟುಗಳನ್ನು ತೆರೆಯಲಾಗಿ, ಹಿನ್ನೀರು ಖಾಲಿಯಾದ ಬಳಿಕ ಮರಳಿನಿಂದಾವೃತವಾದ ಉದ್ಭವ ಲಿಂಗದ ಸ್ಥಳ ಗೋಚರಿಸುತ್ತಿದೆ.