ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ: ರಮೇಶ ಡಾಕುಳಗಿ ವಾಗ್ದಾನ

| Published : Oct 17 2024, 12:00 AM IST / Updated: Oct 17 2024, 12:01 AM IST

ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ: ರಮೇಶ ಡಾಕುಳಗಿ ವಾಗ್ದಾನ
Share this Article
  • FB
  • TW
  • Linkdin
  • Email

ಸಾರಾಂಶ

ಆಣದೂರಿನ ಧಮ್ಮ ದರ್ಶನ ಭೂಮಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ನೂತನ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಅವರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

‌ಶೋಷಿತರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ಕಲ್ಪಿಸಿಕೊಡುವ ಜೊತೆಗೆ ಸಂವಿಧಾನ, ಪ್ರಜಾಪ್ರಭುತ್ವದ ಸಂರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸಮಾನತೆಗಾಗಿ ನಿರಂತರ ಹೋರಾಟ ನಡೆಸಲಾಗುವುದು ಎಂದು ನೂತನ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕರಾಗಿ ನೇಮಕಗೊಂಡ ರಮೇಶ ಡಾಕುಳಗಿ ಹೇಳಿದರು.

ರಮೇಶ‌ ಡಾಕುಳಗಿ ಅವರಿಗೆ ಆಣದೂರ ಬುದ್ಧ ವಿಹಾರ ಧಮ್ಮದರ್ಶನ ಭೂಮಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಮಿತಿಯ ಜಿಲ್ಲಾ ಘಟಕದ ಅಭಿನಂದನಾ ಸಮಾರಂಭದಲ್ಲಿ ‌ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯ ಸಂಘಟನಾ ಸಂಚಾಲಕ ಹೊಣೆ ದೊರಕಿದ್ದು, ಎಲ್ಲರ ಸಹಕಾರ, ಸಹಭಾಗಿತ್ವದಿಂದ ರಾಜ್ಯದಲ್ಲಿ ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬಲು ಶ್ರಮಿಸಲಾಗುವುದು.‌ ಸಮಿತಿ ಸಂಸ್ಥಾಪಕ ದಿ.ಪ್ರೊ.ಬಿ.ಕೃಷ್ಣಪ್ಪ ಅವರ ಕನಸು, ಅದರ ಆಶಯಕ್ಕನುಗುಣ ಜನಪರ ಕೆಲಸಗಳು ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ದಲಿತ, ಶೋಷಿತ ಸಮುದಾಯಗಳ ಒಕ್ಕೂಟದ ಮುಖಂಡ ಬಸವರಾಜ ಮಾಳಗೆ ಮಾತನಾಡಿ, ದಲಿತ ಚಳವಳಿಯು ದಲಿತರ ಜೊತೆಗೆ ಇತರೆ ಹಿಂದುಳಿದ ವರ್ಗದವರ ಹಿತಕ್ಕಾಗಿಯೂ ನಡೆದಿದೆ. ಈಗ ಕಾಂತರಾಜು ವರದಿ ಜಾರಿಗೆ ಸಾಮೂಹಿಕ ಪ್ರಯತ್ನ ನಡೆದಿರುವುದೇ ಇದಕ್ಕೆ ನಿದರ್ಶನ. ರಮೇಶ ಡಾಕುಳಗಿ ಮೂರು ದಶಕದಿಂದ ಜನಪರವಾದ ಹೋರಾಟದಲ್ಲಿ ತೊಡಗಿದ್ದಾರೆ. ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವ ಹೊಂದಿದ್ದಾರೆ ಎಂದರು.

ಭಂತೆ ಧಮ್ಮಾನಂದ ಸಾನ್ನಿಧ್ಯ ವಹಿಸಿದ್ದರು. ದಸಂಸ ವಿಭಾಗ ಸಂಘಟನಾ ಸಂಚಾಲಕ ರಾಜಕುಮಾರ ಬನ್ನೇರ್, ದಲಿತ ಸಂಘಟನೆಗಳ ಮುಖಂಡರಾದ ಬಾಬುರಾವ ಪಾಸ್ವಾನ್, ಅರುಣ ಪಟೇಲ್, ರಘುನಾಥರಾವ ಗಾಯಕವಾಡ್, ರಮೇಶ ಮಂದಕನಳ್ಳಿ, ಝರೆಪ್ಪ ರಾಂಪುರೆ, ಸಂಜುಕುಮಾರ ಪ್ಯಾಗಿ, ಶಿವಮೂರ್ತಿ ಬಳತ್, ಸುರೇಶ ಸಾಧುರೆ, ಕೈಲಾಸ ಮೇಟಿ, ಮಹಾದೇವ ಗಾಯಕವಾಡ್, ಘಾಳೆಪ್ಪ ಮಳಚಾಪುರ, ರಾಜಕುಮಾರ ಗಾದಗಿ, ಗೋಪಾಲ ಸಾಗರ್ ಇದ್ದರು.