ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಇದೇ ತಿಂಗಳ 20ರಂದು ನಡೆಯುವ ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ಮುಷ್ಕರದ ಯಶಸ್ವಿಗಾಗಿ ಜೆಸಿಟಿಯು ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ವಿವಿಧೆಡೆ ಪ್ರಚಾರಾಂದೋಲನ ನಡೆಸಲಾಯಿತು.ನಗರದ ಪ್ರಮುಖ ವೃತ್ತಗಳಲ್ಲಿ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮುಷ್ಕರಕ್ಕೆ ಬೆಂಬಲ ಕೋರಿ ಪ್ರಚಾರ ನಡೆಸಲಾಯಿತು. ತಾಲೂಕು ಕಚೇರಿ ವೃತ್ತದಲ್ಲಿ ಪ್ರಚಾರಾಂದೋಲನ ಉದ್ಘಾಟನೆ ನಡೆಯಿತು.
ಈ ವೇಳೆ ಮಾತನಾಡಿದ ರೈತ ಹಾಗೂ ಕಾರ್ಮಿಕ ಮುಖಂಡರು, ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಜನ ವಿರೋಧಿ, 8 ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘಕಟ್ಟುವ ಹಕ್ಕು, ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು, ಮತ್ತು ಇಎಸ್ಐ, ಪಿಎಫ್, ಬೋನಸ್ ಪಾವತಿಗಿರುವ ಎಲ್ಲ ವೇತನ ಮಿತಿಯನ್ನು ತೆಗೆಯಬೇಕು ಎಂದು ಆಗ್ರಹಿಸಿದರು.ದೊಡ್ಡಬಳ್ಳಾಪುರದಲ್ಲಿ ನಿರ್ಮಾಣಗೊಂಡು ಮೂರು ವರ್ಷಗಳು ಪೂರೈಸಿರುವ ಇಎಸ್ಐ ಮಲ್ಟಿ ಸ್ಪೆಷಾಲಿಟಿ 100 ಹಾಸಿಗೆಗಳ ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸಿ ಎಲ್ಲಾ ಕಾರ್ಮಿಕರಿಗೆ ಶೀಘ್ರವಾಗಿ ಆರೋಗ್ಯ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಆಹಾರ, ಔಷಧಿಗಳು,ಕೃಷಿ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣ ಗೊಳಿಸಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು,ಪಕ್ಕದ ಕೇರಳ ರಾಜ್ಯದಲ್ಲಿ ನೀಡುವಂತೆ 14 ಜೀವನಾ ಅವಶ್ಯಕ ವಸ್ತುಗಳನ್ನ ಪಡಿತರ ವ್ಯವಸ್ಥೆಯಲ್ಲಿ ವಿತರಿಸಬೇಕು ಎಂದು ಆಗ್ರಹಿಸಿದರು.ವಿದ್ಯುತ್ ತಿದ್ದುಪಡಿ ಮಸೂದೆ 2022 ವಾಪಸ್ ಪಡೆಯಬೇಕು, ಎಲ್ಲ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡಬೇಕು. ಸಂವಿಧಾನದ ಆಶಯಗಳ ಮೇಲಿನ ದಾಳಿ ನಿಲ್ಲಿಸಬೇಕು, ದಿನದ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡುವುದನ್ನು ವಿರೋಧಿಸಿ, ಎಲ್ಲ ವಿಭಾಗದ ದುಡಿಯುವ ಮಹಿಳೆಯರಿಗೆ ವಾರ್ಷಿಕ 12 ದಿನ ವೇತನ ಸಹಿತ ಮುಟ್ಟಿನ ರಜೆ ನೀಡಬೇಕು, ರೈತರ ಒಪ್ಪಿಗೆ ಇಲ್ಲದೆ ಬಲವಂತದ ಭೂಸ್ವಾಧೀನ ಕೈಬಿಡಬೇಕು, ಕನಿಷ್ಠ ಕೂಲಿ ಮಾಸಿಕ 35,000 ನೀಡಬೇಕು, ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ವಿವರಿಸಿದರು.
ಜೆಸಿಟಿಯು ಜಿಲ್ಲಾ ಸಂಚಾಲಕರಾದ ಪಿಎ ವೆಂಕಟೇಶ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್ ಪ್ರಭಾ ಬೆಳವಂಗಲ,ರಾಜ್ಯ ಸಮಿತಿ ಸದಸ್ಯ ಆರ್ ಚಂದ್ರ ತೇಜಸ್ವಿ, ಜನಶಕ್ತಿ ರೈತ ಸಂಘದ ತಾಲೂಕು ಸಂಚಾಲಕ ರಮೇಶ್ ಸಂಕ್ರಾಂತಿ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವ್ ನಾಯಕ್, ಸಿಪಿಎಂ ಮುಖಂಡರಾದ ರುದ್ರಾರಾಧ್ಯ, ರೇಣುಕಾರಾಧ್ಯ, ನೇಕಾರರ ಸಂಘದ ಕೆ ರಘುಕುಮಾರ್, ಎಂ ಚೌಡಯ್ಯ, ಕಾರ್ಮಿಕ ಸಂಘಟನೆಗಳ ಇನಾಯತ್ ಪಾಷ, ಸಾಧಿಕ್ ಪಾಷಾ, ಏಜಾಜ್ ಪಾಷಾ, ಪಿ.ಕೆ ವೆಂಕಟೇಶ್, ನಟರಾಜ್ ಮುಂತಾದವರು ಉಪಸ್ಥಿತರಿದ್ದರು.ಫೋಟೋ-16ಕೆಡಿಬಿಪಿ1- ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ ಹಿನ್ನಲೆ ದೊಡ್ಡಬಳ್ಳಾಪುರದಲ್ಲಿ ಪ್ರಚಾರಾಂದೋಲನ ನಡೆಯಿತು.